ಬೆಂಗಳೂರು: ಪತ್ನಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಸ್ನೇಹಿತನನ್ನೇ ಕೊಲೆಗೈದ ವ್ಯಕ್ತಿ
ಬೆಂಗಳೂರು, ಆ.16: ಪತ್ನಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಸ್ನೇಹಿತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪರಪ್ಪನ ಅಗ್ರಹಾರದ ಎಪಿಎಸ್ ಲೇಔಟ್ ಯೋಗೇಶ್(34) ಕೊಲೆಯಾದವರು. ಆರೋಪಿಗಳಾದ ಮಹೇಶ್(32) ಮತ್ತು ಪ್ರಶಾಂತ್(37)ನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಕೊಲೆಯಾದ ಯೋಗೇಶ್ ಹಾಗೂ ಮಹೇಶ್, ಪ್ರಶಾಂತ್ ಸ್ನೇಹಿತರಾಗಿದ್ದು ಎಪಿಎಸ್ ಲೇಔಟ್‍ನಲ್ಲಿ ವಾಸವಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಯೋಗೀಶನು ಮಹೇಶ್‍ನ ಪತ್ನಿ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾನೆ ಎನ್ನಲಾಗಿದ್ದು, ಆಕ್ರೋಶಗೊಂಡ ಮಹೇಶ್ ಪರಪ್ಪನ ಅಗ್ರಹಾರದ ಎಪಿಎಸ್ ಲೇಔಟ್ ಬಯಲು ಪ್ರದೇಶಕ್ಕೆ ಯೋಗೀಶ್‍ನನ್ನು ಕರೆದುಕೊಂಡು ಹೋಗಿ ಪ್ರಶಾಂತ್ ಹಾಗೂ ಇನ್ನಿಬ್ಬರ ಜೊತೆಗೆ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.