ಕೊರೋನ ಸೋಂಕಿನಿಂದ ಗುಣಮುಖ: ಆರೋಗ್ಯ ಸಚಿವ ಶ್ರೀರಾಮುಲು ಆಸ್ಪತ್ರೆಯಿಂದ ಬಿಡುಗಡೆ

Update: 2020-08-16 15:36 GMT

ಬೆಂಗಳೂರು, ಆ. 16: ಮಾರಕ ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇಲ್ಲಿನ ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸಂಪೂರ್ಣ ಗುಣಮುಖರಾಗಿದ್ದು ರವಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

`ನಿಮ್ಮೆಲ್ಲರ ಶುಭ ಹಾರೈಕೆಯಿಂದ ಕೋವಿಡ್ ಸೋಂಕಿನಿಂದ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ. ಕೋವಿಡ್ ಸೋಂಕು ದೃಢಪಟ್ಟಾಗ ನಮ್ಮ ಸರಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆಗೆ ದಾಖಲಾದೆ. ಅಲ್ಲಿನ ಅತ್ಯುತ್ತಮ ಚಿಕಿತ್ಸೆಯಿಂದ ಶೀಘ್ರ ಗುಣಮುಖನಾಗಿದ್ದೇನೆ ಎಂದು ಸಚಿವ ಶ್ರೀರಾಮುಲು ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

`ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ತಜ್ಞ ವೈದ್ಯರ ತಂಡ ಮತ್ತು ವೈದ್ಯಕೀಯ ಸಿಬ್ಬಂದಿ ನೀಡಿದ ಕಾಳಜಿ ಪೂರ್ಣ ಚಿಕಿತ್ಸೆ, ಪ್ರೀತಿಪೂರ್ವಕ ಆರೈಕೆಯಿಂದ ಹೃದಯ ತುಂಬಿ ಬಂದಿದೆ. ನನ್ನನ್ನು ಮೂಕನನ್ನಾಗಿಸಿದೆ. ಅವರೆಲ್ಲರಿಗೂ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಆಸ್ಪತ್ರೆಯಲ್ಲಿದ್ದಷ್ಟೂ ಕಾಲ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಬಂಧುಗಳು, ಸ್ನೇಹಿತರು, ಹಿತೈಷಿಗಳು ಹಾಗೂ ಅಭಿಮಾನಿಗಳೆಲ್ಲರಿಗೂ ಕೃತಜ್ಞತೆಗಳು. ಇದೇ ವೇಳೆ ಸಂಪೂರ್ಣ ಸಹಕಾರ ನೀಡಿದ ಮುಖ್ಯಮಂತ್ರಿ ಹಾಗೂ ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು' ಎಂದು ಶ್ರೀರಾಮುಲು ತಿಳಿಸಿದ್ದಾರೆ.

ಆ.9ರಂದು ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದ್ದ ಕೊರೋನ ಪಾಸಿಟಿವ್ ಬಂದಿತ್ತು. ಆ ಹಿನ್ನೆಲೆಯಲ್ಲಿ ಸರಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆ ದಾಖಲಾಗಿದ್ದರು. ಇಲಾಖೆ ಕೆಲಸ-ಕಾರ್ಯಗಳು ನಿಲ್ಲಬಾರದೆಂಬ ಕಾರಣಕ್ಕೆ ಆಸ್ಪತ್ರೆಯಿಂದಲೇ ಇಲಾಖೆ ಕಡತಗಳ ಪರಿಶೀಲನೆ ನಡೆಸಿದ್ದರು. ಆರೋಗ್ಯ ಸಚಿವ ಶ್ರೀರಾಮುಲು ಅವರು ಸರಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆ ದಾಖಲಾಗಿದ್ದು ಸಾರ್ವಜನಿಕ ವಲಯದ ಮೆಚ್ಚುಗೆಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News