ತನ್ನ ಮೊಬೈಲ್ ಹ್ಯಾಕ್ ಮಾಡಲಾಗಿದೆ ಎಂಬ ಆರೋಪಿ ನವೀನ್ ಪ್ರತಿಪಾದನೆ ತಳ್ಳಿ ಹಾಕಿದ ಪೊಲೀಸರು
ಬೆಂಗಳೂರು, ಆ. 16: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ಹಿಂಸಾಚಾರಕ್ಕೆ ಕಾರಣವಾದ ಪ್ರವಾದಿ ಕುರಿತ ನಿಂದನೆಯ ಪೋಸ್ಟ್ ಕಾಣಿಸಿಕೊಳ್ಳುವ ಮೊದಲೇ ತನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿತ್ತು ಎಂಬ ಆರೋಪಿ ಪಿ. ನವೀನ್ ಕುಮಾರ್‌ನ ಪ್ರತಿಪಾದನೆಯನ್ನು ಬೆಂಗಳೂರು ಪೊಲೀಸ್‌ನ ಸೈಬರ್ ವಿಧಿ ವಿಜ್ಞಾನ ತಂಡ ತಳ್ಳಿ ಹಾಕಿದೆ.
ಆದರೆ, ನವೀನ್‌ನ ಮಾವ ಹಾಗೂ ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಅಪರಿಚಿತ ವ್ಯಕ್ತಿ ನವೀನ್ ಕುಮಾರ್ ಮೊಬೈಲ್ ಬಳಸಿಕೊಂಡು ಆಕ್ಷೇಪಾರ್ಹ ಪೋಸ್ಟ್ ಹಾಕಿರುವ ಸಾಧ್ಯತೆ ಇದೆ. ಅವರು ರಾಜಕೀಯ ಆಕಾಂಕ್ಷಿಯಾಗಿರುವುದರಿಂದ ಅವರ ನಿವಾಸಕ್ಕೆ ಹಲವರು ಭೇಟಿ ನೀಡುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ನವೀನ್ ಕುಮಾರ್ ಫೋನ್‌ನಿಂದ ಫೇಸ್‌ಬುಕ್ ಬಳಸಿಕೊಂಡು ಆಕ್ಷೇಪಾರ್ಹ ಸಂದೇಶವನ್ನು ಪೋಸ್ಟ್ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ. ಈಗ ವಿಧಿವಿಜ್ಞಾನ ತಜ್ಞರು ಕರೆ ಹಾಗೂ ಸಂದೇಶಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ತನ್ನ ಮನೆಗೆ ಹಲವು ಮಂದಿ ಸಂದರ್ಶಕರು ಭೇಟಿ ನೀಡುತ್ತಾರೆ. ತನ್ನ ಫೋನ್‌ಗೆ ಪಾಸ್‌ವರ್ಡ್ ರಕ್ಷಣೆ ಇಲ್ಲ ಎಂದು ನವೀನ್ ಕುಮಾರ್ ಹೇಳಿದ್ದಾನೆ. ಆತನ ಪ್ರತಿಪಾದನೆ ಸತ್ಯವೇ ಎಂದು ನಾವು ಪರಿಶೀಲಿಸುತ್ತಿದ್ದೇವೆ. ನಮಗೆ ಆತನ ನಿವಾಸದ ನೆರೆಯ ಸಿಸಿಟಿವಿ ದೃಶ್ಯಾವಳಿ ದೊರಕಿದೆ. ಅದರಲ್ಲಿ ಏನಾದರೂ ಪುರಾವೆಗಳು ಇವೆಯೇ ಎಂದು ನಾವು ಪರಿಶೀಲಿಸಲಿದ್ದೇವೆ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಅಂದು ತನ್ನ ನಿವಾಸಕ್ಕೆ ಭೇಟಿ ನೀಡಿದ ಕೆಲವರ ಹೆಸರನ್ನು ನವೀನ ನಮಗೆ ನೀಡಿದ್ದಾನೆ. ಅವರ ಫೋನ್ ಕರೆಯನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.