‘ಪಿಎಂ ಕೇರ್ಸ್’ ಫಂಡ್ ಕುರಿತ ಮಾಹಿತಿ ಕೋರಿದ್ದ ಆರ್‌ಟಿಐ ಅರ್ಜಿ ತಿರಸ್ಕರಿಸಿದ ಪ್ರಧಾನಿ ಕಚೇರಿ

Update: 2020-08-18 18:16 GMT

ಹೊಸದಿಲ್ಲಿ,ಆ.18: ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟಕ್ಕಾಗಿ ರಚಿಸಲಾದ ಪಿಎಂ ಕೇರ್ಸ್ ನಿಧಿಯಡಿ ಸಂಗ್ರಹಿಸಲಾಗಿರುವ ಹಣವನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (ಎನ್‌ಡಿಆರ್‌ಎಫ್)ಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಸ್ಪಷ್ಟಪಡಿಸಿತು.

ಪಿಎಂ ಕೇರ್ಸ್ ನಿಧಿಯು ಸಂಗ್ರಹಿಸಿರುವ ನಿಧಿಯು ದತ್ತಿ ಸಂಸ್ಥೆಗಳಿಂದ ಬಂದಿದ್ದು, ಸಂಪೂರ್ಣವಾಗಿ ಭಿನ್ನವಾಗಿದೆ ಎಂದೂ ಹೇಳಿದ ನ್ಯಾಯಾಲಯವು,ಸರಕಾರವು ಸೂಕ್ತವೆಂದು ಭಾವಿಸಿದರೆ ಪಿಎಂಕೇರ್ಸ್ ನಿಧಿಯಿಂದ ಹಣವನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸಬಹುದು ಎಂದು ತಿಳಿಸಿತು.

ಎನ್‌ಜಿಒ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಪೀಠವು, ಯಾವುದೇ ದೇಣಿಗೆ ಅಥವಾ ಅನುದಾನವನ್ನು ಎನ್‌ಡಿಆರ್‌ಎಫ್‌ಗೆ ನೀಡಬಹುದು ಮತ್ತು ಯಾರೇ ಆದರೂ ಸ್ವಯಂಪ್ರೇರಿತವಾಗಿ ದೇಣಿಗೆಯನ್ನು ಸಲ್ಲಿಸಬಹುದು ಎಂದು ಹೇಳಿತು.

 ಪಿಎಂ ಕೇರ್ಸ್ ನಿಧಿಯು ದೇಣಿಗೆಗಳ ಮೂಲಕ ಸಂಗ್ರಹಿಸಿರುವ ಹಣವನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸಲು ಸರಕಾರಕ್ಕೆ ನಿರ್ದೇಶ ನೀಡುವಂತೆ ಕೋರಿದ್ದ ಅರ್ಜಿದಾರರು, ಪಿಎಂ  ಕೇರ್ಸ್ ನಿಧಿಯು ವಿಪತ್ತು ನಿರ್ವಹಣಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಾದಿಸಿದ್ದರು. ಇಂತಹ ಯಾವುದೇ ಸೂಚನೆಯನ್ನು ಕೇಂದ್ರಕ್ಕೆ ನೀಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿತು.

ಯಾವುದೇ ಹೊಸ ಯೋಜನೆಯ ಅಗತ್ಯವಿಲ್ಲ ಮತ್ತು ಕಳೆದ ನವಂಬರ್‌ನಲ್ಲಿ ಸರಕಾರವು ರೂಪಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯೇ ಕೋವಿಡ್-19ನ್ನು ನಿಭಾಯಿಸಲು ಸಾಕು ಎಂದು ಪೀಠವು ತಿಳಿಸಿತು.

 ದೇಶವು ಹಾಲಿ ಎದುರಿಸುತ್ತಿರುವ ಕೋವಿಡ್ ಬಿಕ್ಕಟ್ಟಿನಂತಹ ಯಾವುದೇ ತುರ್ತು ಸ್ಥಿತಿಯನ್ನು ಎದುರಿಸಲು ಮತ್ತು ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಲು ಕೇಂದ್ರವು ಮಾ.28ರಂದು ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಿತ್ತು. ಪ್ರಧಾನಿಯವರು ಇದರ ಪದನಿಮಿತ್ತ ಅಧ್ಯಕ್ಷರಾಗಿದ್ದರೆ, ರಕ್ಷಣಾ, ಗೃಹ ಮತ್ತು ವಿತ್ತ ಸಚಿವರು ಪದನಿಮಿತ್ತ ಟ್ರಸ್ಟಿಗಳಾಗಿದ್ದಾರೆ.

ಪಿಎಂ ಕೇರ್ಸ್ ನಿಧಿಯ ಕಾನೂನು ಸಿಂಧುತ್ವವನ್ನು ಮತ್ತು ಅದರ ಸ್ಥಾಪನೆಯ ಅಗತ್ಯವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮತ್ತು ಇತರರು ಇಂತಹುದೇ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯನ್ನು ಬೆಟ್ಟುಮಾಡಿದ್ದಾರೆ.

 ರಾಜ್ಯ ವಿಪತ್ತು ಪರಿಹಾರ ನಿಧಿಗಳಿಗೆ ಮಾಡಲಾಗುವ ದೇಣಿಗೆಗಳಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಲಾಭಗಳ ನಿರಾಕರಣೆ ಮತ್ತು ಪಿಎಂ ಕೇರ್ಸ್ ನಿಧಿಯು ಸಿಎಜಿ ವ್ಯಾಪ್ತಿಯಲ್ಲಿಲ್ಲ ಎನ್ನುವುದರ ಕುರಿತು ಈಗಾಗಲೇ ಕಳವಳಗಳು ವ್ಯಕ್ತವಾಗಿವೆ.

ಪಿಎಂ ಕೇರ್ಸ್ ನಿಧಿಯು ಸ್ವಯಂಪ್ರೇರಿತ ದೇಣಿಗೆಗಳನ್ನು ಸ್ವೀಕರಿಸುವ ವ್ಯವಸ್ಥೆಯಾಗಿದೆ ಮತ್ತು ಎನ್‌ಡಿಆರ್‌ಎಫ್‌ಗಾಗಿ ಬಜೆಟ್ ಮೂಲಕ ಹಣವನ್ನು ಹಂಚಿಕೆ ಮಾಡಲಾಗುತ್ತದೆ. ಎನ್‌ಡಿಆರ್‌ಎಫ್ ಅಸ್ತಿತ್ವದಲ್ಲಿದೆ ಎಂದ ಮಾತ್ರಕ್ಕೆ ಅದು ಸ್ವಯಂಪ್ರೇರಿತ ದೇಣಿಗೆಗಳಿಗಾಗಿ ಪಿಎಂ ಕೇರ್ಸ್ ನಿಧಿಯ ಸ್ಥಾಪನೆಯನ್ನು ನಿಷೇಧಿಸುವುದಿಲ್ಲ ಎಂದು ಕೇಂದ್ರ ಸರಕಾರವು ನ್ಯಾಯಾಲಯದಲ್ಲಿ ವಾದಿಸಿತ್ತು.

ಸುಪ್ರೀಂ ತೀರ್ಪಿನಿಂದ ಪಾರದರ್ಶಕತೆಗೆ ಹಿನ್ನಡೆ:ಕಾಂಗ್ರೆಸ್

 ತೀರ್ಪಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ರಣದೀಪ ಸುರ್ಜೆವಾಲಾ ಅವರು,ಸರ್ವೋಚ್ಚ ನ್ಯಾಯಾಲಯದ ತೀರ್ಪು ಜನತೆಗೆ ಸರಕಾರದ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಬಲವಾದ ಆಘಾತವನ್ನುಂಟು ಮಾಡಿದೆ. ಮತದಾರರತ್ತ ಆಡಳಿತಗಾರರ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವಕ್ಕೆ ಇಂದು ದುಃಖಕರ ದಿನವಾಗಿದೆ ಮತ್ತು ಅವರು ದೊರೆಗಳಲ್ಲ,ಜನರ ಸೇವಕರಾಗಿದ್ದಾರೆ ಎನ್ನುವುದನ್ನು ನೆನಪಿಸುವ ದಿನವಾಗಿದೆ ಎಂದು ಟ್ವೀಟಿಸಿದ್ದಾರೆ.

ತನ್ನ ತೀರ್ಪಿನ ಮೂಲಕ ಸರ್ವೋಚ್ಚ ನ್ಯಾಯಾಲಯವು ಸಾರ್ವಜನಿಕರಿಂದ ಹಣವನ್ನು ಕೋರುವ ಆದರೆ ಅಪಾರದರ್ಶಕತೆ ಮತ್ತು ಅಸ್ಪಷ್ಟ ನಿಯಮಗಳನ್ನು ಹೊಂದಿರುವ ಪಿಎಂಕೇರ್ಸ್ ನಿಧಿಯ ಕುರಿತು ಪ್ರಶ್ನಿಸುವ ಅವಕಾಶವನ್ನು ಕೈಚೆಲ್ಲಿದೆ ಎಂದೂ ಅವರು ಹೇಳಿದ್ದಾರೆ.

ಪಿಎಂ ಕೇರ್ಸ್ ನಿಧಿಯಲ್ಲಿ ಪಾರದರ್ಶಕತೆ ಸ್ಪಷ್ಟವಾಗಿದೆ:ಬಿಜೆಪಿ

ಪಿಎಂ ಕೇರ್ಸ್ ನಿಧಿಯಡಿ ಸಂಗ್ರಹಿತ ಹಣವನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸುವಂತೆ ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದ ಬಳಿಕ ಕಾಂಗ್ರೆಸ್ ವಿರುದ್ಧ,ವಿಶೇಷವಾಗಿ ರಾಹುಲ್ ಗಾಂಧಿಯವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ ಬಿಜೆಪಿಯು,ಅವರು ಮೊದಲ ದಿನದಿಂದಲೇ ಕೊರೋನ ವೈರಸ್ ವಿರುದ್ಧದ ಸರಕಾರದ ಹೋರಾಟದಲ್ಲಿ ಅದನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ್ದರು ಎಂದು ಹೇಳಿದೆ.

 ಪಿಎಂ ಕೇರ್ಸ್ ನಿಧಿ ಪಾರದರ್ಶಕವಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಪಿಎಂ ಕೇರ್ಸ್ ನಿಧಿಯನ್ನು ಅನಗತ್ಯವಾಗಿ ಗುರಿಯಾಗಿಸಿಕೊಳ್ಳಲಾಗಿತ್ತು. ತನ್ನ ಸಲಹೆಗಾರರ ಮಾತಿನಂತೆ ರಾಹುಲ್ ಈ ಕೆಲಸವನ್ನು ಮಾಡಿದ್ದರು. ರಾಹುಲ್ ಹಲವಾರು ರಂಗಗಳಲ್ಲಿ ದೇಶವನ್ನು ದುರ್ಬಲಗೊಳಿಸಲು ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೊರೋನ ವೈರಸ್ ವಿರುದ್ಧ ಹೋರಾಡುವ ದೇಶದ ದೃಢಸಂಕಲ್ಪವನ್ನು ದುರ್ಬಲಗೊಳಿಸಲು ಯಾವುದೇ ಪ್ರಯತ್ನಗಳನ್ನು ಅವರು ಬಿಟ್ಟಿರಲಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News