ಪ್ರೊಬಯಾಟಿಕ್ ಮತ್ತು ಪ್ರಿಬಯಾಟಿಕ್‌ಗಳ ನಡುವಿನ ವ್ಯತ್ಯಾಸ ನಿಮಗೆ ಗೊತ್ತೇ?

Update: 2020-08-17 18:40 GMT

ಪ್ರೊಬಯಾಟಿಕ್ಸ್ ಮತ್ತು ಪ್ರಿಬಯಾಟಿಕ್ಸ್ ಶಬ್ಧಗಳು ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಪೋಷಕಾಂಶಭರಿತ ಆರೋಗ್ಯಕರ ಆಹಾರ ಸೇವನೆಯ ಬಗ್ಗೆ ಕಾಳಜಿ ಹೊಂದಿರುವವರಿಗೆ ಇವೆರಡರ ನಡುವಿನ ಸೂಕ್ಷ್ಮ ವ್ಯತ್ಯಾಸ ಗೊತ್ತಿರುತ್ತದೆ. ಇವೆರಡೂ ಶಬ್ಧಗಳು ಕೇಳಲು ಒಂದೇ ರೀತಿ ಇದ್ದಿರಬಹುದಾದರೂ ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಇವೆರಡೂ ಸಂಪೂರ್ಣವಾಗಿ ವಿಭಿನ್ನ ಪಾತ್ರಗಳನ್ನು ಹೊಂದಿವೆ. ಪ್ರೊಬಯಾಟಿಕ್ಸ್ ಎಂದರೆ ಕರುಳಿನ ಆರೋಗ್ಯವನ್ನು ಹೆಚ್ಚಿಸುವ ಬ್ಯಾಕ್ಟೀರಿಯಾ ಆಗಿದ್ದರೆ,ಅವುಗಳನ್ನು ವರ್ಧಿಸುವ ಆಹಾರಗಳನ್ನು ಪ್ರಿಬಯಾಟಿಕ್ಸ್ ಎಂದು ಕರೆಯಲಾಗುತ್ತದೆ.

ಪ್ರೊಬಯಾಟಿಕ್ ಮತ್ತು ಪ್ರಿಬಯಾಟಿಕ್ ಇವೆರಡೂ ನಮ್ಮ ಆರೋಗ್ಯಕ್ಕೆ ಲಾಭದಾಯಕವಾಗಿವೆ. ನಮ್ಮ ಕರುಳು ಸೂಕ್ತವಾಗಿ ಕಾರ್ಯ ನಿರ್ವಹಿಸಲು ಇವೆರಡೂ ಅಗತ್ಯವಾಗಿವೆ. ಕರುಳಿನಲ್ಲಿ ಸೂಕ್ಷ್ಮಾಣು ಜೀವಿಗಳ ಸಮತೋಲನವನ್ನು ಕಾಯ್ದುಕೊಳ್ಳಲು ಇವೆರಡನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ.

ಕರುಳಿಗೆ ಒಳ್ಳೆಯದಾದ ಬ್ಯಾಕ್ಟೀರಿಯಾಗಳು ಜೀರ್ಣಾಂಗವನ್ನು ಹಾನಿಕಾರಕ ವೈರಸ್‌ಗಳು,ಬ್ಯಾಕ್ಟೀರಿಯಾಗಳು ಮತ್ತು ಶಿಲೀಂಧ್ರಗಳಿಂದ ರಕ್ಷಿಸುತ್ತವೆ. ನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸುವ ಮೂಲಕ ಉರಿಯೂತದ ವಿರುದ್ಧ ಹೋರಾಡುವ ಅವು ಜಠರದ ಸಮಸ್ಯೆಗಳನ್ನು ತಡೆಯುತ್ತವೆ. ಅವುಗಳಲ್ಲಿರುವ ಶಾರ್ಟ್-ಚೈನ್ ಫ್ಯಾಟಿ ಆ್ಯಸಿಡ್‌ಗಳು ಕರುಳಿನ ಭಿತ್ತಿಯಲ್ಲಿರುವ ಜೀವಕೋಶಗಳಿಗೆ ಪೂರಕವಾಗಿವೆ ಮತ್ತು ಹಾನಿಕಾರಕ ವಸ್ತುಗಳ ವಿರುದ್ಧ ತಡೆಗೋಡೆಯಾಗಿ ಕೆಲಸ ಮಾಡುತ್ತವೆ. ಕರುಳಿನ ಬ್ಯಾಕ್ಟೀರಿಯಾಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಕರುಳು ಕ್ಯಾನ್ಸರ್‌ನ ಅಪಾಯವು ತಗ್ಗುತ್ತದೆ. ಮೊಡವೆಗಳುನ್ನು ಕಡಿಮೆ ಮಾಡಲೂ ಪ್ರೊಬಯಾಟಿಕ್ ಆಹಾರಗಳು ನೆರವಾಗುತ್ತವೆ.

ಆಹಾರ ಮತ್ತು ಕರುಳಿನ ಸೂಕ್ಷ್ಮಜೀವಿಗಳು

ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯದ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತದೆ. ನಾವು ಆರೋಗ್ಯಕರ ಆಹಾರವನ್ನು ಹೆಚ್ಚು ಸೇವಿಸಿದಷ್ಟೂ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಹೆಚ್ಚುತ್ತವೆ. ಇದೇ ರೀತಿ ಅನಾರೋಗ್ಯಕರ ಆಹಾರವನ್ನು ಸೇವಿಸಿದಷ್ಟೂ ಈ ಬ್ಯಾಕ್ಟೀರಿಯಾಗಳು ಕಡಿಮೆಯಾಗುತ್ತವೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳು ಹೆಚ್ಚುತ್ತವೆ ಹಾಗೂ ಇವು ನಮ್ಮ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತವೆ.

ಪ್ರೊಬಯಾಟಿಕ್ ಆಹಾರಗಳು

ನೈಸರ್ಗಿಕವಾಗಿ ಒಳ್ಳೆಯ ಬ್ಯಾಕ್ಟೀರಿಯಾಗಳು ಹೊಂದಿರುವ ಆಹಾರಗಳು ಪ್ರೊಬಯಾಟಿಕ್ ಆಹಾರಗಳಾಗಿವೆ. ಕರುಳನ್ನು ಪ್ರವೇಶಿಸುವ ಅವು ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಿರ್ಮೂಲನ ಮಾಡುವ ಮೂಲಕ ಕರುಳಿನ ಆರೋಗ್ಯವನ್ನು ಕಾಯ್ದುಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುತ್ತವೆ.

ಸಾದಾ ಮೊಸರು,ಹುದುಗು ಬರಿಸಿದ ಕ್ಯಾಬೇಜ್ ಮತ್ತು ತರಕಾರಿಗಳು,ಆಡಿನ ಹಾಲು ಅಥವಾ ಕೆಫಿರ್ ಧಾನ್ಯಗಳನ್ನು ಬಳಸಿ ಹುದುಗು ಬರಿಸಿದ ಉತ್ಪನ್ನಗಳು,ಮನೆಯಲ್ಲಿಯೇ ತಯಾರಿಸಿದ ಉಪ್ಪಿನಕಾಯಿ ಇತ್ಯಾದಿಗಳು ಪ್ರೊಬಯಾಟಿಕ್ ಆಹಾರಗಳಾಗಿವೆ. ಒಳ್ಳೆಯ ಕರುಳಿನ ಬ್ಯಾಕ್ಟೀರಿಯಾಗಳ ಪ್ರಮಾಣವನ್ನು ಕಾಯ್ದುಕೊಳ್ಳಲು ಇವುಗಳಲ್ಲಿ ಒಂದನ್ನು ಪ್ರತಿದಿನ ಸೇವಿಸಬೇಕು. ಈ ಪೈಕಿ ಸಾದಾ ಮೊಸರು (ಮನೆಯಲ್ಲಿಯೇ ತಯಾರಿಸಿದ್ದಾದರೆ ಒಳ್ಳೆಯದು) ಅತ್ಯುತ್ತಮ ಆಯ್ಕೆಯಾಗಿದೆ.

ಪ್ರಿಬಯಾಟಿಕ್ ಆಹಾರಗಳು

ಇಂದಿನ ದಿನಗಳಲ್ಲಿ ಹಲವಾರು ಜನರು ಪ್ರಿಬಯಾಟಿಕ್ ಪೂರಕಗಳನ್ನು ಖರೀದಿಸುತ್ತಾರೆ. ಆದರೆ ಆಹಾರದ ಮೂಲಕ ಪ್ರಿಬಯಾಟಿಕ್‌ಗಳನ್ನು ಪಡೆಯಲು ಸಾಧ್ಯವಿರುವಾಗ ಪೂರಕಗಳೇಕೆ? ನಮ್ಮ ಪ್ರಿಬಯಾಟಿಕ್ ಅಗತ್ಯಗಳನ್ನು ಪೂರೈಸಬಲ್ಲ ಹಲವಾರು ಆಹಾರಗಳಿವೆ. ಇವುಗಳಲ್ಲಿರುವ ನಾರನ್ನು ಶರೀರವು ಜೀರ್ಣಿಸಲಾಗುವುದಿಲ್ಲ,ಆದರೆ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಈ ಕೆಲಸವನ್ನು ಮಾಡುತ್ತವೆ. ಪ್ರಿಬಯಾಟಿಕ್ ಆಹಾರಗಳು ಕರುಳಿನಲ್ಲಿ ಪ್ರೊಬಯಾಟಿಕ್‌ಗಳು ವರ್ಧಿಸಲು ನೆರವಾಗುತ್ತವೆ ಮತ್ತು ಕೆಟ್ಟಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ.

ಬಾಳೆಹಣ್ಣು,ಓಟ್ಸ್,ಬೆರ್ರಿಗಳು,ಬೆಳ್ಳುಳ್ಳಿ,ಈರುಳ್ಳಿ,ಬೀನ್ಸ್,ಬಟಾಣಿ ಮತ್ತು ದ್ವಿದಳ ಧಾನ್ಯಗಳು ಇತ್ಯಾದಿಗಳು ಪ್ರಿಬಯಾಟಿಕ್ ಆಹಾರಗಳ ಪಟ್ಟಿಯಲ್ಲಿ ಸೇರುತ್ತವೆ.

 ಪ್ರೊಬಯಾಟಿಕ್ಸ್ ಮತ್ತು ಪ್ರಿಬಯಾಟಿಕ್ಸ್ ಇವೆರಡೂ ಕರುಳಿಗೆ ಆರೋಗ್ಯಕರವಾಗಿವೆ,ಏಕೈಕ ವ್ಯತ್ಯಾಸವಿರುವುದು ಅವುಗಳ ಪಾತ್ರದಲ್ಲಿ. ಪ್ರೊಬಯಾಟಿಕ್‌ಗಳು ನೇರವಾಗಿ ಕಾರ್ಯವೆಸಗಿದರೆ ಪ್ರಿಬಯಾಟಿಕ್ಸ್ ಕರುಳಿನಲ್ಲಿ ಪ್ರೊಬಯಾಟಿಕ್‌ಗಳು ಹೆಚ್ಚಲು ನೆರವಾಗುತ್ತವೆ. ಆರೋಗ್ಯಕರ ಜಠರಕ್ಕಾಗಿ ನಮ್ಮ ಆಹಾರಕ್ರಮದಲ್ಲಿ ಇವೆರಡನ್ನೂ ಸೇರಿಸಿಕೊಳ್ಳುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News