ಗಾಂಧಿ ಕುಟುಂಬದ ಹೊರಗಿನವರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬ ರಾಹುಲ್ ಅಭಿಪ್ರಾಯಕ್ಕೆ ಸಹಮತವಿದೆ

Update: 2020-08-18 12:09 GMT

ಹೊಸದಿಲ್ಲಿ: ಗಾಂಧಿ ಕುಟುಂಬದ ಹೊರಗಿನವರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬ ಸಹೋದರ ರಾಹುಲ್ ಗಾಂಧಿ ಅಭಿಪ್ರಾಯದ ಬಗ್ಗೆ ತಾನು ಸಂಪೂರ್ಣ ಸಹಮತ ಹೊಂದಿರುವುದಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

“ಪ್ರಾಯಶಃ ಪತ್ರದಲ್ಲಿ (ರಾಜೀನಾಮೆ ಪತ್ರ) ಅವರು ಹಾಗೆ ಹೇಳಿಲ್ಲ, ಆದರೆ  ನಾವ್ಯಾರೂ ಪಕ್ಷದ ಅಧ್ಯಕ್ಷರಾಗಬಾರದು ಎಂದು  ಅವರು ಬೇರೆಡೆ ಹೇಳಿದ್ದಾರೆ. ನಾನು ಇದನ್ನು ಒಪ್ಪುತ್ತೇನೆ. ಪಕ್ಷ ತನ್ನದೇ ಆದ ಹಾದಿಯನ್ನು ಕಂಡುಕೊಳ್ಳಬೇಕು” ಎಂದೂ ಅವರು ಹೇಳಿದ್ದಾರೆ.

ಆಗಸ್ಟ್ 13ರಂದು ಪ್ರಕಟಗೊಂಡಿರುವ ಪ್ರದೀಪ್ ಛಿಬ್ಬರ್ ಹಾಗೂ ಹರ್ಷ್ ಶಾ ಅವರು ಬರೆದಿರುವ ‘ಇಂಡಿಯಾ ಟುಮಾರೋ : ಕಾನ್ವರ್ಸೇಶನ್ಸ್ ವಿದ್ ದಿ ನೆಕ್ಸ್ಟ್ ಜನರೇಶನ್ ಆಫ್ ಪೊಲಿಟಿಕಲ್ ಲೀಡರ್ಸ್’ ಇದರಲ್ಲಿ ಪ್ರಿಯಾಂಕ ಅವರ ಸಂದರ್ಶನವನ್ನು ನೀಡಲಾಗಿದೆ.

ಪಕ್ಷದ ಅಧ್ಯಕ್ಷರು ಗಾಂಧಿ ಕುಟುಂಬದವರಲ್ಲದೇ ಇದ್ದರೂ ಅವರು ತಮ್ಮ `ಬಾಸ್' ಆಗಿರುತ್ತಾರೆ ಎಂದೂ ಹೇಳಿರುವ ಪ್ರಿಯಾಂಕ, “ಅವರು (ಅಧ್ಯಕ್ಷರು) ನಾಳೆ ನಾನು ಉತ್ತರ ಪ್ರದೇಶಕ್ಕೆ ಹೋಗುವುದು  ಬೇಡ, ಅಂಡಮಾನ್ ನಿಕೋಬಾರ್‍ಗೆ ಹೋಗಬೇಕೆಂದು ಹೇಳಿದರೆ ನಾನು ಹಾಗೆಯೇ ಹೋಗುತ್ತೇನೆ” ಎಂದು ಪ್ರಿಯಾಂಕ ಹೇಳಿದ್ದಾರೆ.

ತಮ್ಮ ಪತಿ ರಾಬರ್ಟ್ ವಾದ್ರಾ ವಿರುದ್ಧ 2013ರಲ್ಲಿ ಭ್ರಷ್ಟಾಚಾರ ಆರೋಪಗಳನ್ನು ಬಿಜೆಪಿ ಹೊರಿಸಿದಾಗ ಆಗ 13 ವರ್ಷದವನಾಗಿದ್ದ ಪುತ್ರ ರೇಹನ್ ಬಳಿ ಹೋಗಿ ಪ್ರತಿಯೊಂದು ಹಣಕಾಸು ವ್ಯವಹಾರಗಳನ್ನು ಆತನಿಗೆ ತೋರಿಸಿದ್ದಾಗಿ ಅವರು ಹೇಳಿದ್ದಾರೆ.

“ನನ್ನ ಪುತ್ರಿಗೂ ಈ ಬಗ್ಗೆ ಹೇಳಿದ್ದೇನೆ. ಮಕ್ಕಳಿಂದ ಏನನ್ನೂ ನಾನು ಅಡಗಿಸಿಡುವುದಿಲ್ಲ. ನಾನು ಮಾಡುವ ತಪ್ಪುಗಳು ಹಾಗೂ ನನ್ನ ದೌರ್ಬಲ್ಯಗಳ ಬಗ್ಗೆಯೂ ಹೇಳಿಕೊಳ್ಳುತ್ತೇನೆ'' ಎಂದು ಪ್ರಿಯಾಂಕ ಹೇಳಿರುವುದು ಕೃತಿಯಲ್ಲಿ ವಿವರಿಸಲಾಗಿದೆ.

ತಮ್ಮ ಕುಟುಂಬದಲ್ಲಿ ನಡೆದ ಎರಡು ಹತ್ಯೆಗಳು, ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಅವರ ಹತ್ಯೆಗಳು ತಮ್ಮ ಬಾಲ್ಯವನ್ನು ಬಹಳಷ್ಟು ಬಾಧಿಸಿತ್ತು ಎಂದೂ ಅವರು  ಹೇಳಿದ್ದಾರೆ. “ಈ ಎರಡು ಹತ್ಯೆಗಳ ನಡುವಿನ ಏಳು ವರ್ಷಗಳ ಅವಧಿಯಲ್ಲಿ ನಾವು  ಭಯದಿಂದಲೇ ಬದುಕಿದ್ದೆವು.  ತಂದೆ ರಾತ್ರಿ ಮರಳಿ ಬರುತ್ತಿದ್ದಾರೆಂದು ತಿಳಿಯದೆ ನಾನು ಮಲಗುತ್ತಿರಲಿಲ್ಲ. ಪ್ರತಿ ಬಾರಿ ಅವರು ಹೊರಗೆ ಹೋದಾಗಲೆಲ್ಲಾ ಅವರು ಮತ್ತೆ ವಾಪಸ್ ಬರುವುದಿಲ್ಲ ಎಂದು ಅನಿಸುತ್ತಿತ್ತು'' ಎಂದು ಪ್ರಿಯಾಂಕ  ಹೇಳಿರುವುದು ಕೃತಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News