×
Ad

ರಾಜಧಾನಿ ಬೆಂಗಳೂರಿನಲ್ಲಿಂದು 2,242 ಕೊರೋನ ಪ್ರಕರಣ ದೃಢ; 49 ಜನರು ಮೃತ್ಯು

Update: 2020-08-18 22:58 IST

ಬೆಂಗಳೂರು, ಆ.18: ನಗರದಲ್ಲಿ ಮಂಗಳವಾರ ಒಂದೇ ದಿನ 2,242 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 3,520 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಒಟ್ಟು 94,106 ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,532 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಮಂಗಳವಾರ ಸೋಂಕಿಗೆ 49 ಜನರು ಮೃತರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ 59,492 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 33,081 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರಚಿಕಿತ್ಸಾಲಯದಲ್ಲಿ ಒಟ್ಟು 1,16,279 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಬಿಡಿಎನಲ್ಲಿ ಕೊರೋನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕಚೇರಿಯ ಪಿಆರ್‍ಓ ಗೆ ಸೋಂಕು ತಗಲಿದೆ. ಹೀಗಾಗಿ, ಬಿಡಿಎ ಆಯುಕ್ತರ ಕಚೇರಿ, ಕಾರ್ಯದರ್ಶಿ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಮುಖ್ಯಅಭಿಯಂತರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಬಯೋಕಾನ್ ಮುಖ್ಯಸ್ಥೆಗೆ ಕೊರೋನ

ಜೈವಿಕ ತಂತ್ರಜ್ಞಾನ ಕಂಪನಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರಿಗೆ ಕೊರೋನ ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಿರಣ್ ಮಜುಂದಾರ್ ಅವರು, ನನಗೆ ಪರೀಕ್ಷೆಯಲ್ಲಿ ಪಾಸಿಟಿವ್ ಬರುವ ಮೂಲಕ ಕೋವಿಡ್ ಪಟ್ಟಿಗೆ ಸೇರ್ಪಡೆಯಾಗಿದ್ದೇವೆ. ಸೋಂಕಿನ ಕೆಲವು ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ತಿಳಿಸಿದ್ದಾರೆ.

ಬಿಐಇಸಿ ಖಾಲಿ, ಖಾಲಿ

ಈಗಾಗಲೇ ಬಿಐಇಸಿಯ ಐದು ಹಾಲ್‍ಗಳಲ್ಲಿ 10,000 ಬೆಡ್‍ಗಳ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಲಾಗಿದ್ದು, ಸದ್ಯ 6 ಸಾವಿರ ಬೆಡ್‍ಗಳು ಸಂಪೂರ್ಣ ಸಿದ್ಧವಾಗಿವೆ. ಅದರಲ್ಲಿ 1,500 ಬೆಡ್‍ಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಒಟ್ಟು 12 ಕೋವಿಡ್ ಕೇರ್ ಸೆಂಟರ್ ಗಳಲ್ಲಿ 4,576 ಬೆಡ್‍ಗಳಿದ್ದು, ಅದರಲ್ಲಿ 2,966 ಬೆಡ್‍ಗಳು ಭರ್ತಿಯಾಗಿವೆ. ಭರ್ತಿಯಾಗಿರುವ ಬೆಡ್‍ಗಳಲ್ಲೂ ಸಹ 1,610 ಬೆಡ್‍ಗಳ ರೋಗಿಗಳು ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಪ್ರತಿನಿತ್ಯ ಪತ್ತೆಯಾಗುವ ಸೋಂಕಿತರ ಪೈಕಿ ಶೇ.70ರಷ್ಟು ಜನ, ರೋಗಲಕ್ಷಣ ಇಲ್ಲದವರಾಗಿದ್ದಾರೆ. ಅವರಲ್ಲಿ ಶೇ. 40-50 ರಷ್ಟು ಜನ, ಮನೆಯಲ್ಲಿಯೇ ಐಸೋಲೇಷನ್ ಆಗುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಹಾಗೂ ಸರಕಾರದಿಂದ ನಿರ್ಮಿಸಿರುವ ಕೋವಿಡ್‍ ಕೇರ್ ಸೆಂಟರ್ ಗಳ ಬೆಡ್‍ಗಳು ಉಪಯೋಗಕ್ಕೆ ಬಾರದಂತಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News