ಪ್ರತಿಯೊಬ್ಬ ರೋಗಿಗೂ ಸೂಕ್ತ ಚಿಕಿತ್ಸೆ ದೊರಕಿಸುವುದು ಸರಕಾರದ ಆದ್ಯತೆ: ಸಚಿವ ಡಾ.ಕೆ.ಸುಧಾಕರ್

Update: 2020-08-18 18:01 GMT

ಬೆಂಗಳೂರು, ಆ. 18: ರಾಜ್ಯದ ಸಕ್ರಿಯ ಸೋಂಕಿತರ ಪೈಕಿ ಶೇ.0.86ರಷ್ಟು ಕೊರೋನ ವೈರಸ್ ಸೋಂಕಿತರು ಮಾತ್ರ ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿಯೊಬ್ಬ ರೋಗಿಗೂ ಸೂಕ್ತ ಚಿಕಿತ್ಸೆ ದೊರಕಿಸುವುದು ಸರಕಾರದ ಪ್ರಥಮ ಆದ್ಯತೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ಸೋಂಕಿತರ ಚಿಕಿತ್ಸೆಗೆ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಎಲ್ಲ ರೀತಿಯ ಸಹಕಾರ ಮತ್ತು ನೆರವು ನೀಡಲು ಬದ್ಧವಾಗಿದೆ. ಕೊರೋನ ಸೋಂಕಿಗೆ ಚಿಕಿತ್ಸೆಗೆ ಮೂಲಸೌಕರ್ಯ ಒದಗಿಸುವುದು ದೊಡ್ಡ ಸವಾಲು ನಿಜ. ಆದರೆ, ಅದನ್ನು ಹಿಮ್ಮೆಟ್ಟಿಸುವ ನಮ್ಮ ಸಂಕಲ್ಪ ಅದಕ್ಕಿಂತ ಬಲವಾಗಿದೆ ಎಂದು ಹೇಳಿದ್ದಾರೆ.

ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇರುವುದು ನನ್ನ ಗಮನಕ್ಕೆ ಬಂದ ಕೂಡಲೇ 40ಕ್ಕೂ ಹೆಚ್ಚು ರೋಗಿಗಳನ್ನು ವಿಕ್ಟೊರಿಯಾ, ಬೌರಿಂಗ್ ಮತ್ತು ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ 20 ಭಾರೀ ಗಾತ್ರದ ಆಕ್ಸಿಜನ್ ಸಿಲಿಂಡರ್ ಗಳನ್ನು ಕಿಮ್ಸ್ ಗೆ ಕಳುಹಿಸಲಾಗಿದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ರಾಜ್ಯದಲ್ಲಿ 80,643 ಸಕ್ರಿಯ ಕೋವಿಡ್-19 ಪ್ರಕರಣಗಳಿದ್ದು, ಅದರಲ್ಲಿ 695 ಅಂದರೆ ಶೇ.0.86ರಷ್ಟು ಸೋಂಕಿತರು ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಚಿಕಿತ್ಸೆಗೆ ಮೂಲಭೂತ ಸೌಕರ್ಯವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದ್ದು ಯಾವುದೇ ಕೊರತೆಯಿಲ್ಲ. ಕಿಮ್ಸ್ ಆಸ್ಪತೆಯಿಂದ 14 ರೋಗಿಗಳನ್ನು ವಿಕ್ಟೊರಿಯಾ ಆಸ್ಪತ್ರೆಗೆ ಮತ್ತು 15 ರೋಗಿಗಳನ್ನು ಬೌರಿಂಗ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಸುರಕ್ಷಿತವಾಗಿ ರವಾನಿಸಲಾಗಿದೆ. ತುರ್ತು ಪರಿಸ್ಥಿತಿಗಾಗಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 40 ಆಕ್ಸಿಜನ್ ಬೆಡ್‍ಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News