ಫ್ಯಾಕ್ಟ್ ಚೆಕ್: ವೈರಲ್ ಆಗುತ್ತಿರುವ ಶ್ರೀಕೃಷ್ಣನ ಆಕ್ಷೇಪಾರ್ಹ ಚಿತ್ರ 2015ರದ್ದು

Update: 2020-08-19 11:25 GMT

ಹೊಸದಿಲ್ಲಿ: ಶ್ರೀ ಕೃಷ್ಣನನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಿರುವ ವರ್ಣಚಿತ್ರದ ಫೋಟೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವರ್ಣಚಿತ್ರವು ಗುವಾಹತಿಯ ಸ್ಟೇಟ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿತಗೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಹರಿಯಬಿಡಲಾಗುತ್ತಿದೆ.

ಆಕ್ಷೇಪಾರ್ಹ ಫೇಸ್ ಬುಕ್ ಪೋಸ್ಟ್ ಒಂದರ ಹಿನ್ನೆಲೆಯಲ್ಲಿ ಬೆಂಗಳೂರು ಗಲಭೆ ಉಂಟಾಗಿದ್ದರಿಂದ ಶ್ರೀಕೃಷ್ಣನನ್ನು ಆಕ್ಷೇಪಾರ್ಹವಾಗಿ ಬಿಂಬಿಸಿದ ಈ ಚಿತ್ರದ  ಕುರಿತಂತೆಯೂ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಚಿತ್ರ ರಚಿಸಿದ ಅಕ್ರಂ ಹುಸೈನ್ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಸಂದೇಶ ಹರಿಯಬಿಡುತ್ತಿದ್ದಾರೆ.

‘ನ್ಯೂಸ್ ನೇಷನ್’ ಸಲಹಾ ಸಂಪಾದಕ ದೀಪಕ್ ಚೌರಾಸಿಯಾ ಕೂಡ ಈ ಕುರಿತು ಟ್ವೀಟ್ ಮಾಡಿ, “ಬೆಂಗಳೂರು ಗಲಭೆ ನಿಮಗೆಲ್ಲರಿಗೂ ನೆನಪಿರಬಹುದು, ಆದರೆ ನಿಜವಾಗಿಯೂ ನಾವು ಅಸಹಿಷ್ಣುಗಳು ಎಂದು ಹೇಳಲಾಗುತ್ತದೆ'' ಎಂದಿದ್ದರು. ಅವರು ಮಾಡಿದ ಟ್ವೀಟ್ ಅನ್ನು 9,000ಕ್ಕೂ ಅಧಿಕ ಮಂದಿ ಲೈಕ್ ಮಾಡಿ 3,000ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ. ಇನ್ನೂ ಹಲವರು ಇದೇ ವಿಚಾರ ಮುಂದಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ.

ವಾಸ್ತವವೇನು?

ಮೊದಲನೆಯದಾಗಿ ಈ ಚಿತ್ರ ಹೊಸದಲ್ಲ. ಈ ವರ್ಣಚಿತ್ರದ ಕುರಿತಾದ ವಿಚಾರ 2015ರಲ್ಲಿ ಮೊದಲು ಸುದ್ದಿಯಾಗಿತ್ತು ಹಾಗೂ ಈಗ ಅದು ಯಾವ ಗ್ಯಾಲರಿಯಲ್ಲೂ ಪ್ರದರ್ಶಿತಗೊಂಡಿಲ್ಲ. ಅಸ್ಸಾಂ ಮೂಲದ ಕಲಾವಿದ ಅಕ್ರಮ್ ಹುಸೈನ್ 2015ರಲ್ಲಿ  ಈ ಚಿತ್ರವನ್ನು ರಚಿಸಿದ್ದು, 2015ರಲ್ಲೇ ಅವರನ್ನು ಬಂಧಿಸಲಾಗಿತ್ತು.

2015 ಎಪ್ರಿಲ್  ತಿಂಗಳಿನಲ್ಲಿ ಗುವಾಹತಿ ಪೊಲೀಸರು ಹಿಂದು ಜಾಗರಣ್ ಮಂಚ್ ನೀಡಿದ್ದ ದೂರಿನ ಆಧಾರದಲ್ಲಿ ಅಕ್ರಮ್ ಹುಸೈನ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಇದಾದ ಬೆನ್ನಲ್ಲೇ ಕಲಾವಿದ ಈ ಪೈಂಟಿಂಗ್ ತೆಗೆದು ಹಾಕಿ ಕ್ಷಮೆ ಕೋರಿದ್ದರು. ನಂತರ ಪೊಲೀಸರು ಹುಸೈನ್‍ ನನ್ನು ಮೇ 30, 2015ರಂದು ಬಂಧಿಸಿದ್ದರು.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News