×
Ad

ವಾರ್ಡ್‍ಗೆ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಮೂರು ದಿನ ಮಾತ್ರ ಆಚರಣೆ: ಮಂಜುನಾಥ್ ಪ್ರಸಾದ್

Update: 2020-08-19 23:08 IST

ಬೆಂಗಳೂರು, ಆ.19: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ವಾರ್ಡ್‍ಗೆ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಮೂರು ದಿನಕ್ಕೆ ಆಚರಣೆ ಮುಕ್ತಾಯಗೊಳಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವಾರ್ಡ್‍ಗೆ ಒಂದರಂತೆ ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಎತ್ತರ ಮೀರದ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಜತೆಗೆ, ಮನೆಯಲ್ಲಿ 2 ಅಡಿ ಎತ್ತರ ಮೀರದ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಅದರಂತೆ, ಎಲ್ಲ ನಿಯಮಾವಳಿಗಳನ್ನು ಪಾಲಿಕೆಯಿಂದ ರೂಪಿಸಲಾಗಿದೆ ಎಂದರು.

ನಗರದಲ್ಲಿ 198 ವಾರ್ಡ್‍ಗಳಿದ್ದು, ಯಾವ ಸಂಘ-ಸಂಸ್ಥೆಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂಬ ಬಗ್ಗೆ ಪೊಲೀಸ್ ಆಯುಕ್ತರ ಜತೆ ಚರ್ಚೆ ಮಾಡಲಾಗಿದೆ. ಆಯಾ ವಲಯದ ಜಂಟಿಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಅರ್ಜಿ ಸಲ್ಲಿಸಿದ ಸಂಘ-ಸಂಸ್ಥೆಗಳಲ್ಲಿ ಒಬ್ಬರಿಗೆ ಅನುಮತಿ ನೀಡಲಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ 3 ದಿನ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದು ಎಂದರು.

ಗರಿಷ್ಠ 20 ಜನ ಮೀರದಂತೆ, ಸುರಕ್ಷಿತ ಅಂತರ ಕಾಯ್ದುಕೊಂಡು ಆಚರಣೆ ಮಾಡಬೇಕು. ಈ ವೇಳೆ ಯಾವುದೇ ಸಾಂಸ್ಕೃತಿಕ ಅಥವಾ ಮನೋರಂಜನಾ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಪಾಲಿಕೆಯಿಂದ ಅನುಮತಿ ನೀಡುವ ವೇಳೆ ಎಲ್ಲಿ ವಿಸರ್ಜನೆ ಮಾಡಬೇಕು ಎಂಬುದನ್ನು ತಿಳಿಸಲಾಗುವುದು ಎಂದರು.  

ಮನೆಯಲ್ಲೇ ವಿಸರ್ಜನೆ
ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ತಮ್ಮ ಮನೆಗಳಲ್ಲಿಯೇ ವಿಸರ್ಜನೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಬಿಬಿಎಂಪಿ ವತಿಯಿಂದ ಈ ಬಾರಿ ವಿಸರ್ಜನೆಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ ಎಂದು ಆಯುಕ್ತರು ತಿಳಿಸಿದರು.

ಪರಿಸರ ಸ್ನೇಹಿ ಗಣೇಶನಿಗೆ ಮಾತ್ರ ಅವಕಾಶ
ಗಣೇಶ ಪ್ರತಿಷ್ಠಾಪನೆಗೆ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವುದು ಕಡ್ಡಾಯವಾಗಿದೆ. ರಾಸಾಯನಿಕ ಬಣ್ಣ, ಥರ್ಮಕೋಲ್ ಹಾಗೂ ಪ್ಲಾಸ್ಟರ್‍ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿüಸಲಾಗಿದೆ. ಈ ರೀತಿಯ ವಸ್ತುಗಳಿಂದ ತಯಾರಿಸಿದ ಮೂರ್ತಿಗಳನ್ನು ಮಾರಾಟ ಮಾಡುವುದು ಪತ್ತೆಯಾದರೆ, ಜಪ್ತಿ ಮಾಡಿ ದಂಡ ವಿಧಿಸಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಮೆರವಣಿಗೆ ನಿಷೇಧ
ಕಂಟೈನ್ಮೆಂಟ್ ಪ್ರದೇಶಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡುವಂತಿಲ್ಲ. ಬಿಬಿಎಂಪಿಯಿಂದ ಅನುಮತಿ ಪಡೆದ ಸ್ಥಳದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆ ಮಾಡಬೇಕು. ಅದಕ್ಕೆ ಬೆಸ್ಕಾಂ ಹಾಗೂ ಅಗ್ನಿಶಾಮಕ ದಳ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಆಚರಣೆ ಸ್ಥಳದಲ್ಲಿ 6 ಅಡಿಗೆ ಒಂದು ಗುರುತು ತಯಾರಿಸಿ ಭಕ್ತರ ವೀಕ್ಷಣೆಗೆ ಅನುಮತಿ ನೀಡಬಹುದಾಗಿದೆ. ಪ್ರತಿನಿತ್ಯ ಸ್ಥಳವನ್ನು ಸ್ಯಾನಿಟೈಸೇಷನ್ ಮಾಡುವುದು ಕಡ್ಡಾಯವಾಗಿದೆ. ಇನ್ನು ಮುಖ್ಯವಾಗಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಸ್ಥಳಕ್ಕೆ ತರುವಾಗ ಮತ್ತು ಪಾಲಿಕೆ ಗುರುತಿಸಿದ ಸ್ಥಳಕ್ಕೆ ಮೂರ್ತಿ ವಿಸರ್ಜನೆ ಮಾಡಲು ಹೋಗುವಾಗ ಯಾವುದೇ ಮೆರವಣಿಗೆ ಮಾಡುವಂತಿಲ್ಲ.
-ಮಂಜುನಾಥ್ ಪ್ರಸಾದ್, ಪಾಲಿಕೆ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News