ಬಿಬಿಎಂಪಿ ಚುನಾವಣೆ 6 ತಿಂಗಳು ಮುಂದೂಡಿಕೆ ಸಾಧ್ಯತೆ
ಬೆಂಗಳೂರು, ಆ.20: ಬಿಬಿಎಂಪಿ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧಗೊಳ್ಳದೆ ಇರುವುದರಿಂದ ಕನಿಷ್ಠ ಪಕ್ಷ ಇನ್ನು 6 ತಿಂಗಳ ನಂತರ ನಡೆಯಲಿದೆ ಎನ್ನಲಾಗುತ್ತಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಬಿಎಂಪಿ ಮತದಾರ ಪಟ್ಟಿ ಪರಿಸ್ಕರಣೆಗೆ ಮುಂದಾಗಿದ್ದು, ಮತದಾರರ ಪಟ್ಟಿ ಇಲ್ಲದೆ ಬಿಬಿಎಂಪಿ ಚುನಾವಣೆ ನಡೆಸಲಾಗುವುದಿಲ್ಲ. ಆ.20ರಿಂದ ಬಿಬಿಎಂಪಿ 198 ವಾರ್ಡ್ ಗಳ ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯ ಆರಂಭವಾಗಲಿದ್ದು, ನವೆಂಬರ್ 30ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದ್ದು, ಬಿಬಿಎಂಪಿ ಚುನಾವಣೆ ನಿಗದಿಯಂತೆ ನಡೆಯುವುದಿಲ್ಲ ಎನ್ನಲಾಗುತ್ತಿದೆ.
2020ರ ಜನವರಿ ಮತ್ತು ಫೆಬ್ರವರಿಯ ಮತದಾರ ಪಟ್ಟಿ ಅನುಗುಣವಾಗಿ, ಮರು ವಿಂಗಡೆನೆಯಾದ 198 ವಾರ್ಡ್ ಗಳ ಅನುಸಾರವಾಗಿ ಮತದಾರ ಪಟ್ಟಿ ಸಿದ್ಧವಾಗಲಿದ್ದು, ಆ.20ರಿಂದ ಆ.26ರವರೆಗೆ ಮತದಾರ ಪಟ್ಟಿ ಸಿದ್ಧಪಡಿಸುವ ಕುರಿತು ಅಧಿಕಾರಿಗಳಿಗೆ ತರಬೇತಿ, ಆ.26ರಿಂದ ಸೆ.14 ವರೆಗೆ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲನೆ, ಸೆ.15 ಮತ್ತು ಅ.7ರವರೆಗೆ ಮತದಾರ ಪಟ್ಟಿ ಮುದ್ರಣ, ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆ ನಡೆಯಲಿದೆ.
ಅಕ್ಟೋಬರ್ 8ರಂದು ವಾರ್ಡ್ ವಾರು ಮತದಾರ ಪಟ್ಟಿ ಬಿಡುಗಡೆ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಅ.27ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು. ಪರಿಷ್ಕರಣೆ ಬಳಿಕ ನ.30ರಂದು ಅಂತಿಮ ಮತದಾರ ಪಟ್ಟಿ ಬಿಡುಗಡೆಯಾಗಲಿದೆ. ಹೊಸದಾಗಿ ಮತದಾರ ಪಟ್ಟಿಗೆ ಹೆಸರು ನೋಂದಣಿ, ಸ್ಥಳ ಬದಲಾವಣೆ ಹಾಗೂ ಲೋಪದೋಷ ಸರಿಪಡಿಸಿಕೊಳ್ಳುವುದಕ್ಕೆ ಮತ್ತು ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕುವುದಕ್ಕೆ ಚುನಾವಣೆ ಅಧಿಸೂಚನೆ ನಂತರ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದವರೆಗೆ ಅವಕಾಶವಿರಲಿದೆ.
ಕಳೆದ ವರ್ಷ ಈ ವೇಳೆಗೆ ಚುನಾವಣೆ ಪೂರ್ಣವಾಗಿತ್ತು ಬಿಬಿಎಂಪಿಗೆ ಕಳೆದ 2015ರ ಆ.22ರಂದು ಚುನಾವಣೆ ನಡೆಸಲಾಗಿತ್ತು. ಆ.25ರಂದು ಫಲಿತಾಂಶ ಪ್ರಕಟವಾಗಿತ್ತು. ಸೆ.10ರಂದು ಮೇಯರ್, ಉಪಮೇಯರ್ ಆಯ್ಕೆ ಹಾಗೂ ಸದಸ್ಯರ ಪ್ರಮಾಣ ವಚನ ಸ್ವೀಕರಿಸಿದ್ದರು. ಹಾಲಿ ಕೌನ್ಸಿಲ್ ಸದಸ್ಯರು ಸೆ.10ರವರೆಗೆ ಕೌನ್ಸಿಲ್ ಸಭೆ ನಡೆಸುವ, ನಿರ್ಣಯ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಿಕೆ ಕಾನೂನು ವಿಭಾಗದಿಂದ ಸಲಹೆ ಕೇಳಲಿದೆ.