ಶಿಶು ಆಹಾರ ತಯಾರಕರ ಸೆಮಿನಾರ್: ವಿವರ ಕೋರಿ ವೈದ್ಯರಿಗೆ ಕೇಂದ್ರದ ಪತ್ರ

Update: 2020-08-20 17:32 GMT

ಹೊಸದಿಲ್ಲಿ, ಆ.20: ಅಮೆರಿಕ ಮೂಲದ ಔಷಧ ತಯಾರಿಕಾ ಸಂಸ್ಥೆ ಅಬಾಟ್ ಮತ್ತು ಯುರೋಪ್ ಮೂಲದ ಆಹಾರ ತಯಾರಿಕಾ ಸಂಸ್ಥೆ ಡನೋನ್ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ನಡೆದಿದ್ದ ಐದು ವೆಬ್‌ ಸೆಮಿನಾರ್‌ಗಳು ಭಾರತದಲ್ಲಿ ಶಿಶುಗಳಿಗೆ ಎದೆಹಾಲುಣಿಸುವುದನ್ನು ಉತ್ತೇಜಿಸುವ ನಿಯಮದ ಉಲ್ಲಂಘನೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ , ಈ ಬಗ್ಗೆ ವಿವರಣೆ ಕೋರಿ ಕೇಂದ್ರ ಸರಕಾರ ವೈದ್ಯರಿಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ.

ಈ ಎರಡೂ ಸಂಸ್ಥೆಗಳು ತಮ್ಮ ಶಿಶು ಆಹಾರವನ್ನು ಜನಪ್ರಿಯಗೊಳಿಸಲು ಈ ವೆಬ್‌ಸೆಮಿನಾರ್ ಆಯೋಜಿಸಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಗಸ್ಟ್ 18ರಂದು ಎರಡು ಪ್ರತ್ಯೇಕ ಪತ್ರ ರವಾನಿಸಿದೆ. ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್(ಐಎಪಿ- ಭಾರತೀಯ ಶಿಶುವೈದ್ಯರ ಅಕಾಡೆಮಿ) ಮತ್ತು ಫೆಡರೇಶನ್ ಆಫ್ ಅಬ್ಸ್ಟೆರಿಕ್ ಮತ್ತು ಗೈನಕಾಲೊಜಿಕಲ್ ಸೊಸೈಟೀಸ್ ಆಫ್ ಇಂಡಿಯಾ (ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘಗಳ ಒಕ್ಕೂಟ)ಕ್ಕೆ ಪತ್ರ ಬರೆದು ವಿವರ ಒದಗಿಸುವಂತೆ ಸೂಚಿಸಲಾಗಿದೆ.

ಈ ಸೆಮಿನಾರ್, ಭಾರತದಲ್ಲಿ ಶಿಶುಗಳಿಗೆ ಎದೆಹಾಲುಣಿಸುವುದನ್ನು ಪ್ರೋತ್ಸಾಹಿಸುವ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಬ್ರೆಸ್ಟ್‌ಫೀಡಿಂಗ್ ಪ್ರೊಮೋಷನ್ ನೆಟ್‌ವರ್ಕ್ ಆಫ್ ಇಂಡಿಯಾ ಎಂಬ ಸರಕಾರೇತರ ಸಂಸ್ಥೆ ನೀಡಿದ ದೂರಿನಂತೆ ಈ ಪತ್ರ ಬರೆಯಲಾಗಿದೆ. 23 ಮೇಯಿಂದ ಆಗಸ್ಟ್ 8ರವರೆಗೆ ವೈದ್ಯರಿಗೆ ಈ ಸೆಮಿನಾರ್ ನಡೆದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News