ರೈತರ ಮನೆಬಾಗಿಲಿಗೆ `ಪಶು ಸಂಜೀವಿನಿ' ಸಂಚಾರಿ ಚಿಕಿತ್ಸಾಲಯಕ್ಕೆ ಸಿಎಂ ಚಾಲನೆ

Update: 2020-08-20 17:43 GMT

ಬೆಂಗಳೂರು, ಆ.20: ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಸರಕಾರ ಸಜ್ಜಾಗಿದ್ದು, ರೈತರ ಕರೆಗಳಿಗೆ ತುರ್ತಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಲಿದೆ. ಈ ಸೇವೆಗಳನ್ನು ಇಲಾಖೆಯ ಸಹಾಯವಾಣಿ ಸೇವೆಗಳಿಗೆ ಲಿಂಕ್ ಮಾಡಿ 24/7 ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಬಳಿ ಪಶುಸಂಗೋಪನಾ ಇಲಾಖೆಯ ವತಿಯಿಂದ ಆಯೋಜಿಸಿದ್ದ `ಪಶುಸಂಜೀವಿನಿ' ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ವಾಹನಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ 15 ಜಿಲ್ಲೆಗಳಿಗೆ 2 ಕೋಟಿ ಅನುದಾನದಲ್ಲಿ ಸುಸಜ್ಜಿತ ವಾಹನ ಸೌಲಭ್ಯ ಒದಗಿಸಲಾಗಿದೆ. ರೈತರಿಗೆ, ಪಶುಪಾಲಕರಿಗೆ, ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಪರಿಣಾಮಕಾರಿಯಾಗಿ ಪಶುವೈದ್ಯಕೀಯ ಸೇವೆ ತಲುಪಿಸುವುದು ಯೋಜನೆಯ ಗುರಿ. ರೈತರ ಮನೆಬಾಗಿಲಿಗೆ ತಜ್ಞಪಶು ವೈದ್ಯಕೀಯ ಸೇವೆ ಸಲ್ಲಿಸುವ ಯೋಜನೆ ಕಾರ್ಯರೂಪ ಬರಲಿದೆ.  ಪಶುಚಿಕಿತ್ಸಾ ವಾಹನದಲ್ಲಿ ಅತ್ಯಾಧುನಿಕ ಸುಸಜ್ಜಿತವಾದ ವ್ಯವಸ್ಥೆ ಹೊಂದಿದ್ದು ವಿಶೇಷವಾದ ಪಶುಸೇವಾ ಸೌಲಭ್ಯಗಳು ತ್ವರಿತವಾಗಿ ದೊರೆಯಲಿದೆ ಎಂದರು.

ಈ ವಾಹನದಲ್ಲಿ ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗಶಾಲೆ, ಸ್ಕಾನಿಂಗ್, ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಪಶುಗಳಿಗೆ ವಿವಿಧ ಆರೋಗ್ಯ ಸೇವೆಗಳು ಲಭ್ಯವಾಗಲಿದೆ. ಈ ಸೇವೆಯನ್ನು ಇಲಾಖೆಯ ಸಹಾಯವಾಣಿ ಸೇವೆಗಳಿಗೆ ಲಿಂಕ್ ಮಾಡಿ 24/7   ಜಾನುವಾರುಗಳ ರಕ್ಷಣೆಗೆ ಉದ್ದೇಶಿಸಲಾಗಿದೆ. ಸದರಿ ಪಶುವೈದ್ಯಕೀಯ ಆಂಬುಲೆನ್ಸ್ ಸೇವೆಯನ್ನು ಪಶುಪಾಲಕರ ಸಹಾಯವಾಣಿ ಸಂಖ್ಯೆ-1962 ಸಂಯೋಜಿಸಿ ಅವಶ್ಯಕ ಮತ್ತು ತುರ್ತು ಸೇವೆ ನೀಡಲು ಕ್ರಮವಹಿಸಲಾಗಿದೆ ಎಂದರು. 

ಪಶು ಶಸ್ತ್ರಚಿಕಿತ್ಸಾ ವಾಹನವನ್ನು ಉಪಯೋಗಿಸಿಕೊಂಡು ಜಿಲ್ಲೆಯಾದ್ಯಂತ ವಾರದಲ್ಲಿ 1 ದಿನ ಪಶುವೈದ್ಯಕೀಯ  ಶಸ್ತ್ರಚಿಕಿತ್ಸಾ ತಜ್ಞರು ಮತು ಪ್ರಸೂತಿ ತಜ್ಞರು ಬರಡುರಾಸುಗಳ ಚಿಕಿತ್ಸಾ ಶಿಬಿರ ಮತ್ತು ಅನುಪಾಲನಾ ಶಿಬಿರಗಳಲ್ಲಿ ಭಾಗವಹಿಸಿ ತಜ್ಞ ಪಶುವೈದ್ಯಕೀಯ ಸೇವೆಯನ್ನು ಒದಗಿಸುತ್ತಾರೆ. ರೈತರಿಗಾಗಿ ಪಶುಸ್ನೇಹಿ ಯೋಜನೆ ಇಲಾಖೆಯಿಂದ ಇನ್ನಷ್ಟು ಜರಿಗೆ ತರಲಾಗುತ್ತದೆ. ಈಗ 15 ಜಿಲ್ಲೆಗಳಿಗೆ ವಿತರಣೆ ಮಾಡಲಾಗುತ್ತದೆ. ಉಳಿದ ಜಿಲ್ಲೆಗಳಿಗೆ ಆದಷ್ಟು ಬೇಗ ಈ ವಾಹನದ ವ್ಯವಸ್ಥೆ ಮಾಡುತ್ತೇವೆ ಎಂದು ನುಡಿದರು. ರೈತರು ಈ ಸೌಲಭ್ಯವನ್ನು ಸದುಪಯೋಗಪಡಿಸಬೇಕೆಂದು ತಿಳಿಸಿದರು.

ಕೃಷಿ ಹಾಗೂ ಪಶುಸಂಗೋಪನೆ ಗ್ರಾಮೀಣ ಪ್ರದೇಶ  ಆರ್ಥಿಕ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿರುತ್ತದೆ.  ಪಶುಸಂಗೋಪನೆ ರೈತರ ಆದಾಯ ಹೆಚ್ಚಿಸುವ ಮಹತ್ವದ ನಿರ್ವಹಿಸುತ್ತದೆ. ರಾಜ್ಯದ ಕೃಷಿ ಜಿಡಿಪಿಯಲ್ಲಿ ಪಶುಸಂಗೋಪನೆ ಪ್ರಮುಖ ಪಾತ್ರವಹಿಸುತ್ತದೆ. ಶೇ.20.07ರಷ್ಟು ಒಟ್ಟಾರೆ ಜಿಡಿಪಿಯಲ್ಲಿ 2.03 ಆಗಿದೆ. ಗ್ರಾಮೀಣ ಪ್ರದೇಶದ ಜನರು ವ್ಯವಸಾಯ ಮತ್ತು ಪಶುಸಂಗೋಪನೆಯನ್ನು ಹೆಚ್ಚಾಗಿ ಅವಲಂಭಿಸಿದ್ದು ಜಾನುವಾರುಗಳ ಆರೋಗ್ಯ ರಕ್ಷಣೆ ಕಡೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಹೇಳಿದರು.

ಉಪ ಮುಖಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪಶುಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News