ನಿಮ್ಮ ಪರಿಹಾರದಿಂದ ನ್ಯಾಯ ಸಿಗುವುದಿಲ್ಲ, ಆತ್ಮಹತ್ಯೆಗೆ ಕಾರಣರಾದವರನ್ನು ಶಿಕ್ಷಿಸಿ: ಡಿ.ಕೆ.ಶಿವಕುಮಾರ್
ಬೆಂಗಳೂರು, ಆ. 21: `ಆತ್ಮಹತ್ಯೆ ಮಾಡಿಕೊಂಡ ವೈದ್ಯಾಧಿಕಾರಿ ಕುಟುಂಬಕ್ಕೆ ಸರಕಾರ 50 ಲಕ್ಷ ರೂ. ಪರಿಹಾರ ನೀಡುವುದರಿಂದ ಅವರಿಗೆ ನ್ಯಾಯ ಸಿಗುವುದಿಲ್ಲ. ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಂದಿಲ್ಲಿ ಆಗ್ರಹಿಸಿದ್ದಾರೆ.
ಶುಕ್ರವಾರ ಇಲ್ಲಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ವೈದ್ಯಾಧಿಕಾರಿಗಳ ಸಾವಿಗೆ ನೀವು 50 ಲಕ್ಷ ರೂ.ಗಳನಾದರೂ ಕೊಡಿ, 1 ಕೋಟಿ ರೂ.ಗಳನ್ನಾದರೂ ಕೊಡಿ. ಅವರ ಕುಟುಂಬದವರು ನಿಮ್ಮ ಹಣಕ್ಕಾಗಿ ಕಾಯುತ್ತಾ ಕೂತಿಲ್ಲ. ವೈದ್ಯಾಧಿಕಾರಿ ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಅದಕ್ಕೆ ಕಾರಣರು ಯಾರು? ಅವರ ವಿರುದ್ಧ ಯಾವ ಕ್ರಮ ಕೈಗೊಂಡಿರಿ? ಎಂಬುದು ಮುಖ್ಯ.
ವ್ಯಕ್ತಿ ಸತ್ತ ಮೇಲೆ ಇವರೇನು ಕೊಡುವುದು. ಆ ಹೆಣ್ಣುಮಗಳು ಇವರ ಬಳಿ ದುಡ್ಡು ಕೊಡಿ ಅಂತಾ ಕೇಳಿದರಾ? ದುಡ್ಡು ಪರಿಹಾರವಲ್ಲ. ಅವರಿಗೆ ನ್ಯಾಯ ಒದಗಿಸಿಕೊಡಬೇಕು. ಅವರ ಈ ಸ್ಥಿತಿಗೆ ಕಾರಣವಾದರಿಗೆ ಶಿಕ್ಷೆ ಆಗಬೇಕು. ಮಾಧ್ಯಮಗಳು ಆಡಿಯೋ ಪ್ರಸಾರ ಮಾಡಿದ ಮೇಲೂ ಸಿಎಂ ಏಕೆ ಯೋಚಿಸುತ್ತಿದ್ದಾರೆ? ವೈದ್ಯರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಅವರಿಗೆ ಧೈರ್ಯ ತುಂಬಬೇಕೆಂದು ಹೇಳಿದ್ದೇನೆ. ನಾನು ವಿಕ್ಟೋರಿಯಾ ಆಸ್ಪತ್ರೆಗೆ ಹೋದಾಗ, ಕೆಲ ಬಿಜೆಪಿ ನಾಯಕರು ಲೇವಡಿ ಮಾಡಿದರು. ನಾನು ಮಂತ್ರಿಯಲ್ಲ, ಸರಕಾರದಲ್ಲಿಲ್ಲ. ಒಂದು ಪಕ್ಷದ ಜವಾಬ್ದಾರಿ ಸ್ಥಾನದಲ್ಲಿದ್ದು, ವೈದ್ಯರು, ಆರೋಗ್ಯ ಸಿಬ್ಬಂದಿಗೆ ರಕ್ಷಣೆ ನೀಡಿ, ಅವರ ಧ್ವನಿಯಾಗಿ ಕೆಲಸ ಮಾಡಬೇಕೆಂದು ಹೋಗಿದ್ದೆ. ಆದರೆ, ಆಡಳಿತ ಪಕ್ಷದವರು ಟೀಕೆ ಮಾಡುತ್ತಿದ್ದಾರೆ, ಮಾಡಲಿ ಎಂದು ಹೇಳಿದರು.
`ತನ್ನ ಪತಿಯನ್ನು ಕಳೆದುಕೊಂಡ ಹೆಣ್ಣುಮಗಳು ಒಂದು ಹೇಳಿಕೆ ನೀಡಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಲು ಸರಕಾರಕ್ಕೆ ಇನ್ನು ಎಷ್ಟು ಸಮಯಬೇಕು? ಸಚಿವರುಗಳು ಡ್ಯಾಮೇಜ್ ಕಂಟ್ರೋಲ್ ಮಾಡಲು ಬೆಳಗ್ಗೆಯಿಂದ ಸಂಜೆವರೆಗೂ ನಿಂತುಕೊಂಡಿದ್ದಾರೆ. ನೀವು ಪ್ರಕರಣ ಮುಚ್ಚಿಹಾಕಲು ಯಾಕೆ ಪ್ರಯತ್ನಿಸುತ್ತಿದ್ದೀರಿ? ಆರೋಗ್ಯ ಇಲಾಖೆಯ ಸ್ಥಿತಿ ಬಗ್ಗೆ ಮಾಧ್ಯಮಗಳು ವಿಸ್ತಾರವಾಗಿ ವರದಿ ಮಾಡುತ್ತಿವೆ. ಆ ಮಾಧ್ಯಮಗಳು ನಮ್ಮ ಪಕ್ಷದವರಾ? ಅಲ್ಲ, ಜನರ ಧ್ವನಿ. ಅವರಿಗೆ ಸಿಕ್ಕ ವಾಸ್ತವಾಂಶವನ್ನು ಜನರಿಗೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಒತ್ತಾಯಿಸುತ್ತೇನೆ. ಆ ವೈದ್ಯ ಆರು ತಿಂಗಳಿಂದ ಮನೆಯಿಂದ ಹೊರಗಿದ್ದು, ಕೆಲಸ ಮಾಡಿದ್ದರೂ, ಅವರ ಮೇಲೆ ದೌರ್ಜನ್ಯವಾಗಿದೆ. ಅವರಿಗೆ ನಿಂದನೆ ಮಾಡಿ, ಆತ ಆತ್ಮಹತ್ಯೆ ಮಾಡಿಕೊಳ್ಳಲು ಕೆಲವರು ಕಾರಣರಾಗಿದ್ದರೂ, ನೀವು ಸುಮ್ಮನೆ ಇದ್ದೀರಿ ಎಂದರೆ ನಿಮ್ಮ ಸರಕಾರ ಯಾವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ ಎಂದು ಗೊತ್ತಾಗುತ್ತದೆ' ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ದಿಲ್ಲಿ ಮಾದರಿ ಇದೇನಾ?
ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ವೈದ್ಯರನ್ನು ಎಷ್ಟು ಕಠಿಣವಾಗಿ ನಡೆಸಿಕೊಳ್ಳುತ್ತಿದ್ದೀರಿ ಎಂಬುದಕ್ಕೆ ಇದೊಂದು ಸಣ್ಣ ಸಾಕ್ಷಿ. ಬೇರೆ ಪ್ರಕರಣಗಳಲ್ಲಿ ಸುಮೋಟೋ ಮೂಲಕ ತನಿಖೆ ನಡೆಸುವ ಸರಕಾರ, ಈ ವಿಚಾರದಲ್ಲಿ ಏಕೆ ಮೌನ ವಹಿಸಿದ್ದೀರಿ? ಸರಕಾರ ಅಧಿವೇಶನ ಕರೆದಿದ್ದು, ಈ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆಂದು ಹೇಳಿದೆ. ಆದರೆ, ಜನರನ್ನು ಉಳಿಸುವ ಕೆಲಸ ಮಾಡುತ್ತಿಲ್ಲ. ದಿಲ್ಲಿ ಮಾದರಿ ಕ್ರಮ ಅಂತಿದ್ದರಲ್ಲಾ, ಇದೇನಾ? ಸರಕಾರ ಈ ವಿಚಾರದಲ್ಲಿ ವಿಳಂಬ ಧೋರಣೆಗೆ ಶರಣಾಗಿದೆ. ಇವರಿಗೆ ಸರಕಾರ ನಡೆಸಲು ಗೊತ್ತಿಲ್ಲ, ಅಧಿಕಾರಿಗಳನ್ನು ಬಳಸಿಕೊಳ್ಳಲೂ ಗೊತ್ತಿಲ್ಲ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ