ಮಾಸ್ಕ್ ಧರಿಸದ ಆರೋಪ: ಬೆಂಗಳೂರಿನ 6 ಪೊಲೀಸರ ಅಮಾನತು

Update: 2020-08-21 13:12 GMT
ಸಾಂದರ್ಭಿಕ ಚಿತ್ರ

ಬೆಂಗಳೂರು,ಆ.21: ಕೊರೋನ ಸೋಂಕು ಹರಡುವಿಕೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಯ್ದುಕೊಳ್ಳದ ನಗರದ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

ಜಾಲಹಳ್ಳಿ ಸಂಚಾರ ಠಾಣೆಯ ಎಎಸ್ಸೈ ಮಂಜುನಾಥಯ್ಯ, ಮುಖ್ಯಪೇದೆ ನಾಗರಾಜು, ಪೇದೆಗಳಾದ ಪದ್ಮನಾಥ್, ಮಧುಸೂದನ್, ವಿಶ್ವನಾಥ್ ಮತ್ತು ಮಹಿಳಾ ಪೇದೆ ಸುಜನಾ ಎಂಬುವರನ್ನು ಅಮಾನತುಗೊಳಿಸಿ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಡಾ. ಸೌಮ್ಯಾ ಲತಾ ಆದೇಶಿಸಿದ್ದಾರೆ.

ಆ.11ರಂದು ಜಾಲಹಳ್ಳಿ ಸಂಚಾರ ಠಾಣೆಯ ಆರು ಸಿಬ್ಬಂದಿಯನ್ನು ಗಂಗಮ್ಮನ ಗುಡಿ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕೋವಿಡ್-19 ಸೋಂಕು ಹರಡುವಿಕೆ ಹಿನ್ನೆಲೆ ಅಗತ್ಯ ಮುಂಜಾಗ್ರತೆ ವಹಿಸುವಂತೆ ಸೂಚನೆಯನ್ನೂ ನೀಡಲಾಗಿತ್ತು. ಆದರೆ, ಹಿರಿಯ ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸಿದ ಆರು ಮಂದಿ ಸಿಬ್ಬಂದಿ ಸಾಹಿತ್ಯ ಕೂಟ ವೃತ್ತದ ಜಂಕ್ಷನ್ ಬಳಿಯ ಪಾರ್ಕ್ ನಲ್ಲಿ ಗುಂಪು ಸೇರಿದ್ದರು.

ಹೀಗೆ ಸೇರಿದ ಸಿಬ್ಬಂದಿ ಯಾವುದೇ ಮಾಸ್ಕ್ ಧರಿಸಿರಲಿಲ್ಲ ಹಾಗೂ ಸುರಕ್ಷಿತ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ. ಈ ಹಿನ್ನೆಲೆ ಸರಕಾರದ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ಶಿಸ್ತುಕ್ರಮವನ್ನು ತೆಗೆದುಕೊಳ್ಳಲಾಗಿದೆ ಸೌಮ್ಯಾ ಲತಾ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News