ಅಮಾಯಕರಿಗೆ ಶಿಕ್ಷೆ ಆಗದಂತೆ ನೋಡಿಕೊಳ್ಳುತ್ತೇವೆ: ಬಸವರಾಜ ಬೊಮ್ಮಾಯಿ
Update: 2020-08-21 20:21 IST
ಬೆಂಗಳೂರು, ಆ.21: ಕಾವಲ್ ಭೈರಸಂದ್ರ ಗಲಾಟೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿರುವ ಹಿನ್ನೆಲೆ ಯಾವುದೇ ರೀತಿಯ ಪ್ರಭಾವ ಬೀರುವುದು ಸರಿಯಲ್ಲ. ಅಷ್ಟೇ ಅಲ್ಲದೆ, ಯಾರೂ ಕೂಡ ತನಿಖೆ ಮಧ್ಯೆ ಪ್ರಭಾವ ಬೀರಿಲ್ಲವೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಯಾವುದೇ ಇರಲಿ, ನಿಷ್ಠುರ, ನಿಷ್ಪಕ್ಷಪಾತವಾಗಿ ನಮ್ಮ ಪೊಲೀಸರು ಕೆಲಸ ಮಾಡುತ್ತಾರೆ. ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ಹಾಗೆಯೇ ಅಮಾಯಕರಿಗೆ ಶಿಕ್ಷೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಎಸ್‍ಡಿಪಿಐ ನಿಷೇಧ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಕೇಂದ್ರದ ಜೊತೆ ಚರ್ಚೆ ಮಾಡುತ್ತಾರೆ. ಜತೆಗೆ ಮಾಹಿತಿಯನ್ನು ಕ್ರಮಬದ್ಧವಾಗಿ ಸಂಗ್ರಹ ಮಾಡಬೇಕಾಗುತ್ತದೆ. ಬಳಿಕ ಅದರ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸುತ್ತೇವೆ. ಈ ಸಂದರ್ಭದಲ್ಲಿ ಬೇರೆ ವ್ಯಾಖ್ಯಾನಗಳು ಬೇಡ ಎಂದರು.