ಎಟಿಎಂನಲ್ಲಿ 32 ಲಕ್ಷ ರೂ. ಕಳವು: ಆರೋಪಿಗಳ ಬಂಧನ
Update: 2020-08-21 21:09 IST
ಬೆಂಗಳೂರು, ಆ.21: ಎಟಿಎಂನಲ್ಲಿ ಹಣ ಕಳವು ಪ್ರಕರಣ ಸಂಬಂಧ ಇಬ್ಬರು ಆರೋಪಿಯನ್ನು ಬಂಧಿಸುವಲ್ಲಿ ಹಲಸೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೌರಿಬಿದನೂರು ಮೂಲದ ಕಿರಣ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಸಿಎಂಎಸ್ ಇನ್ಫೋಸಿಸ್ಟಮ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಕಂಪೆನಿಯಿಂದ ಹಣ ಪಡೆದುಕೊಂಡು ಎಟಿಎಂಗಳಿಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದ ಕಿರಣ್, ಐಟಿಪಿಎಲ್ ರಸ್ತೆ ಹಾಗೂ ಹಲಸೂರು ರಸ್ತೆ ಮಾರ್ಗದ ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ. ಇತ್ತೀಚೆಗೆ ಕಿರಣ್ ಹಣ ತುಂಬಿಸುತ್ತಿದ್ದ ಎಟಿಎಂಗಳ ಜವಾಬ್ದಾರಿಯನ್ನು, ಸೂರ್ಯ ಎಂಬ ವ್ಯಕ್ತಿಗೆ ಕಂಪೆನಿ ವಹಿಸಿತ್ತು. ಕಂಪೆನಿಯ ಆದೇಶದಂತೆ ಹಲಸೂರಿನ 2 ಎಟಿಎಂಗಳಿಗೆ ಸೂರ್ಯ 12 ಲಕ್ಷ ಹಣ ತುಂಬಿಸಿದ್ದ. ಬಳಿಕ ಈ ಎಟಿಎಂ ಕೇಂದ್ರಗಳಿಗೆ ಆರೋಪಿ ಕಿರಣ್, ತೆರಳಿ 32,28,500 ಲಕ್ಷ ಹಣ ಕಳವು ಮಾಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.