×
Ad

ಸಿಇಟಿ ಕೌನ್ಸಲಿಂಗ್ ವೇಳಾಪಟ್ಟಿ ಅಕ್ಟೋಬರ್ ನಲ್ಲಿ ಪ್ರಕಟ: ಅಶ್ವತ್ಥ ನಾರಾಯಣ

Update: 2020-08-21 22:08 IST

ಬೆಂಗಳೂರು, ಆ.21: ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಸಂಬಂಧಿಸಿದ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು, ಜೆಇಇ, ನೀಟ್ ಮುಂತಾದ ಪರೀಕ್ಷೆಗಳ ಕೌನ್ಸಲಿಂಗ್ ವೇಳಾಪಟ್ಟಿಯನ್ನು ನೋಡಿಕೊಂಡು ಸಿಇಟಿ ಕೌನ್ಸಲಿಂಗ್ ವೇಳಾಪಟ್ಟಿಯನ್ನು ಅಕ್ಟೋಬರ್ ನಲ್ಲಿ ಪ್ರಕಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಶುಕ್ರವಾರ ಸಿಇಟಿ ಫಲಿತಾಂಶವನ್ನು ಪ್ರಕಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಸಿಇಟಿ ಕೌನ್ಸಲಿಂಗ್‍ನ್ನು ಆನ್‍ಲೈನ್‍ನಲ್ಲಿ ನಡೆಸಲು ತಯಾರಿ ಮಾಡಿಕೊಂಡಿದ್ದೇವೆ. ಒಟ್ಟು ಎರಡು ಸುತ್ತಿನ ಕೌನ್ಸಲಿಂಗ್ ಮತ್ತು ಅಂತಿಮವಾಗಿ ಒಂದು ವಿಸ್ತರಣಾ ಸುತ್ತು ಇರುತ್ತದೆ ಎಂದು ಮಾಹಿತಿ ನೀಡಿದರು.

2ನೇ ಸುತ್ತಿನ ಕೌನ್ಸಲಿಂಗ್ ಮುಗಿಯುತ್ತಿದ್ದಂತೆ ತಮ್ಮ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ತಡಮಾಡದೆ ತಮ್ಮ ಮೂಲ ದಾಖಲೆಗಳನ್ನು ಸಲ್ಲಿಸಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬೇಕು. ಒಂದು ವೇಳೆ ಶುಲ್ಕ ಪಾವತಿ ಮಾಡಿ ದಾಖಲಾತಿಗಳನ್ನು ಸಲ್ಲಿಸದಿದ್ದರೆ ಆ ಪ್ರವೇಶಾತಿ ತಾನಾಗಿಯೇ ರದ್ದಾಗುತ್ತದೆ. ಈ ಅಂಶವನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಗಮನಿಸಬೇಕೆಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News