ಶುಲ್ಕ ಹೆಚ್ಚಳ ಮಾಡದಂತೆ ಎಫ್‍ಕೆಸಿಸಿಐ ಅಧ್ಯಕ್ಷರಿಂದ ಮುಖ್ಯ ಕಾರ್ಯದರ್ಶಿಗೆ ಪತ್ರ
Update: 2020-08-21 23:37 IST
ಬೆಂಗಳೂರು, ಆ.21: ಕೋವಿಡ್ ಕಾರಣದಿಂದಾಗಿ ವಾಣಿಜ್ಯ ಚಟುವಟಿಕೆ ಕುಸಿದಿದ್ದು, ಈ ಸಂದರ್ಭದಲ್ಲಿ ವ್ಯಾಪಾರ ಪರವಾನಿಗೆ ಶುಲ್ಕ ಹಾಗೂ ಖಾತಾ ಶುಲ್ಕ ಹೆಚ್ಚಳ ಮಾಡಿದರೆ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‍ಕೆಸಿಸಿಐ) ಅಧ್ಯಕ್ಷ ಜನಾರ್ದನ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ಮನವರಿಕೆ ಮಾಡಿದ್ದಾರೆ.
ಕೊರೋನ ಸೋಂಕಿನಿಂದ ನಿರ್ಮಾಣವಾಗಿರುವ ಆರ್ಥಿಕ ತುರ್ತು ಪರಿಸ್ಥಿತಿಯಿಂದಾಗಿ ಸಾವಿರಾರು ಅಂಗಡಿಗಳು ಮುಚ್ಚಿವೆ. ಇಂಥ ಸಂದರ್ಭದಲ್ಲಿ ಪರವಾನಿಗೆ ಶುಲ್ಕ, ಖಾತಾ ಶುಲ್ಕ ಮತ್ತು ಅಭಿವೃದ್ಧಿ ಶುಲ್ಕ ಏರಿಕೆ ಮಾಡಲಾಗುತ್ತಿದೆ. ವರಮಾನ ಸಂಗ್ರಹಕ್ಕೆ ಬಿಬಿಎಂಪಿಗೆ ಸಾಕಷ್ಟು ಅವಕಾಶಗಳಿವೆ. ಅಕ್ರಮ ಸಕ್ರಮದಲ್ಲಿ ಸಾಕಷ್ಟು ವರಮಾನ ಪಡೆಯಬಹುದಾಗಿದೆ. ಆದರೆ, ಶುಲ್ಕ ಏರಿಕೆ ಮಾಡಿ ವ್ಯಾಪಾರಿ ಮತ್ತು ಉದ್ಯಮಿಗಳಿಗೆ ಕಿರುಕುಳ ನೀಡಬಾರದು ಎಂದು ಮನವಿ ಮಾಡಿದ್ದಾರೆ.