ಫೋನ್ ಟ್ಯಾಪಿಂಗ್ ಬಗ್ಗೆ ಸರಿಯಾದ ತನಿಖೆ ಮಾಡದಿದ್ದರೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ: ಡಿ.ಕೆ.ಸುರೇಶ್

Update: 2020-08-23 11:46 GMT

ಬೆಂಗಳೂರು, ಆ. 23: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಘಟನೆಯಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಕುಮ್ಮಕ್ಕಿನಿಂದಲೇ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಘಟನೆ ನಡೆದಿದೆ. ಗಲಾಟೆ ಆರಂಭವಾದ ಬಳಿಕ ನಾಲ್ಕು ಗಂಟೆ ಸರಕಾರ ಸುಮ್ಮನೇ ಇದ್ದದು ಯಾಕೆ? ಬಿಜೆಪಿಯವರೇ ಗಲಾಟೆ ಮಾಡಿಸಿ, ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಕಿಡಿಕಾರಿದರು.             

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಫೋನ್ ಟ್ಯಾಪಿಂಗ್ ವಿಚಾರವಾಗಿ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ಬರೀ ಆರೋಪವಲ್ಲ. ಅದು ಸತ್ಯ. 15 ದಿನಗಳಿಂದ ಕರೆ ಮಾಡಿದರೆ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ. ಕೆಲವರು ದೂರು ಕೊಡುವಂತೆ ಹೇಳಿದ್ದರು. ಹೀಗಾಗಿ, ಡಿಕೆಶಿ ಅವರು ಈಗ ದೂರು ಕೊಟ್ಟಿದ್ದಾರೆ. ಒಂದು ಪಕ್ಷದ ಅಧ್ಯಕ್ಷರು ಗಭೀರ ಆರೋಪ ಮಾಡಿದ್ದಾರೆ. ಇದನ್ನು ಲಘುವಾಗಿ ಪರಿಗಣಿಸೋಕೆ ಸಾಧ್ಯವಿಲ್ಲ. ವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಲು ಅವಕಾಶವಿಲ್ಲ. ಪೊಲೀಸ್ ಆಯುಕ್ತರು ಸರಿಯಾದ ತನಿಖೆ ಮಾಡುವ ಭರವಸೆ ಇದೆ ಎಂದು ಹೇಳಿದರು.

ಈ ಆರೋಪವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಗೃಹ ಸಚಿವರು ಈ ಬಗ್ಗೆ ಲಘುವಾಗಿ ಪರಿಗಣಿಸಬಾರದು. ಯಾರ ನಿರ್ದೇಶನದ ಮೇಲೆ ಫೋನ್ ಟ್ಯಾಪಿಂಗ್ ನಡೀತಿದೆ ಎನ್ನುವುದು ಗೊತ್ತಾಗಬೇಕು. ಸರಿಯಾದ ತನಿಖೆ ಮಾಡಬೇಕಾದ್ದು ಸರಕಾರದ ಜವಾಬ್ದಾರಿ ಇಲ್ಲವಾದರೆ ನಾನೇ ಕೇಂದ್ರ ಸರಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಡಿ.ಕೆ.ಸುರೇಶ್ ಇದೇ ವೇಳೆ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News