ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ

Update: 2020-08-23 14:21 GMT

ಬೆಂಗಳೂರು, ಆ.23: ಹಳೇ ವೈಷಮ್ಯ ಕಾರಣ ಹಿನ್ನೆಲೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಪಿಸ್ತೂಲಿನಿಂದ ಗುಂಡಿನ ದಾಳಿ ನಡೆಸಿ, ಕೊಲೆಗೆ ಯತ್ನಿಸಿರುವ ಘಟನೆ ಇಲ್ಲಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ,

ಕೆಆರ್ ಪುರಂ ನಿವಾಸಿ ಬಾಬು ಎಂಬವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ರಾತ್ರಿ ಕೆಆರ್ ಪುರಂನ ಬಾಬು ಅವರ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಏಕಾಏಕಿ ಪಿಸ್ತೂಲಿನಿಂದ ದಾಳಿ ನಡೆಸಿದ್ದಾರೆ. ಈ ವೇಳೆ ದುಷ್ಕರ್ಮಿಗಳ ಕೈನಿಂದ ತಪ್ಪಿಸಿಕೊಂಡ ಬಾಬು ಹೊರಗೆ ಓಡಿ ಬಂದಿದ್ದಾರೆ. ಅವರ ಕಿರುಚಾಟ ಕೇಳಿ ಅಕ್ಕಪಕ್ಕದ ಜನ ಸೇರಿದ್ದು, ಈ ವೇಳೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

ಪ್ರಾಣಾಪಾಯದಿಂದ ಪಾರಾದ ಬಾಬು ಅವರ ಕೈ, ತಲೆ ಮತ್ತು ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಕೆ.ಆರ್ ಪುರಂ ಪೊಲೀಸರು ಹಾಗೂ ವೈಟ್‍ಫೀಲ್ಡ್ ಡಿಸಿಪಿ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News