×
Ad

ಬೆಂಗಳೂರು: ಕೊರೋನದಿಂದ ಮೃತಪಟ್ಟ ತಂದೆ; ಬಿಲ್ ಕಟ್ಟದೆ ಪರಾರಿಯಾದ ಮಗ

Update: 2020-08-23 20:33 IST

ಷಬೆಂಗಳೂರು, ಆ. 23: ನಗರದಲ್ಲಿ ರವಿವಾರ ಒಂದೇ ದಿನ 2,126 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 5 ಮಂದಿ ಮೃತರಾಗಿದ್ದಾರೆ.

ಇಲ್ಲಿಯವರೆಗೆ ನಗರದಲ್ಲಿ ಒಟ್ಟು 1,07,875 ಮಂದಿಗೆ ಸೋಂಕು ಧೃಢಪಟ್ಟಿದ್ದು, 1,668 ಜನರು ಸೋಂಕಿಗೆ ಬಲಿಯಾಗಿದ್ದಾರೆ. 71,329 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದರೆ, ರವಿವಾರ 1,468 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 34,877 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 1,41,436 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಶನಿವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 16,497 ಕಂಟೈನ್ಮೆಂಟ್ ಝೋನ್ ಗಳಿವೆ. ಇದುವರೆಗೂ 38,123 ಕಂಟೈನ್ಮೆಂಟ್ ಝೊನ್‍ಗಳನ್ನು ಗುರುತಿಸಲಾಗಿದೆ.

ಬಿಲ್ ಕಟ್ಟಲಾಗದೇ ಮಗ ಪರಾರಿ: ಕೊರೋನ ಸೋಂಕಿನಿಂದ 63 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ತಂದೆಯ ಶವವನ್ನು ಪಡೆದರೆ ಆಸ್ಪತ್ರೆಯ ಬಿಲ್ ಪಾವತಿಸಬೇಕು ಎಂಬ ಯೋಚನೆಯಿಂದ ಮೃತನ ಮಗ ಶವ ಪಡೆಯದೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಚಾಮರಾಜಪೇಟೆಯ ನಿವಾಸಿಯಾಗಿದ್ದ 63 ವರ್ಷದ ಸೋಂಕಿತ ವೃದ್ಧ ತೀವ್ರ ಉಸಿರಾಟದ ಸಮಸ್ಯೆಯಿಂದ ಕೆ.ಐ.ಎಂ.ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ, ತಂದೆ ಮೃತಪಟ್ಟು 22 ದಿನ ಕಳೆದರೂ ಅವರ ಮಗ ತಂದೆಯ ಅಂತ್ಯಸಂಸ್ಕಾರ ನೆರವೇರಿಸಲು ಮುಂದೆ ಬಂದಿಲ್ಲ. ಹಾಗಾಗಿ, ವೃದ್ಧನ ಮೃತದೇಹ ಆಸ್ಪತ್ರೆಯಲ್ಲಿಯೇ ಉಳಿದಿತ್ತು ಎನ್ನಲಾಗಿದೆ.

ಮೃತದೇಹದ ಹಸ್ತಾಂತರಕ್ಕೆ ಪುತ್ರನಿಗೆ ಆಸ್ಪತ್ರೆಯ ವೈದ್ಯರು ಕರೆ ಮಾಡಿದಾಗ ಬರುತ್ತೇನೆ ಎಂದವನು ಈವರೆಗೂ ಬಂದಿಲ್ಲ. ಜೊತೆಗೆ, ತಂದೆಯ ಚಿಕಿತ್ಸೆಗೆ ತಗಲಿದ 1.5 ಲಕ್ಷ ರೂ. ಬಿಲ್ ಸಹ ಪಾವತಿಸಿಲ್ಲ. ಆದುದರಿಂದ ಆಸ್ಪತ್ರೆ ಸಿಬ್ಬಂದಿಗಳೇ ಮೃತ ವೃದ್ಧನ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News