‘CAA, NRC ಪ್ರತಿಭಟನೆಯಲ್ಲಿ ಭಾಗಿಯಾದ ಮುಸ್ಲಿಮರಿಗೆ ಎಚ್ಚರಿಕೆ ನೀಡಲು ತಬ್ಲೀಗಿಗಳ ವಿರುದ್ಧ ಅಪಪ್ರಚಾರ ನಡೆಸಲಾಯಿತು’

Update: 2020-08-23 16:17 GMT

ಮುಂಬೈ, ಆ.23: ಸಾಂಕ್ರಾಮಿಕ ಪಿಡುಗು ಅಥವಾ ವಿಪತ್ತುಗಳು ಉಂಟಾದಾಗ ರಾಜಕೀಯ ಸರಕಾರವು ಬಲಿಪಶುವನ್ನು ಹುಡುಕಲು ಪ್ರಯತ್ನಿಸುತ್ತದೆ ಮತ್ತು ಈ ವಿದೇಶಿಯರನ್ನು ಬಲಿಪಶುಗಳನ್ನಾಗಿ ಮಾಡಲು ಆಯ್ಕೆ ಮಾಡಿಕೊಂಡಿರುವ ಸಂಭವವಿದೆ ಎನ್ನುವುದನ್ನು ಸಂದರ್ಭಗಳು ತೋರಿಸುತ್ತಿವೆ ಎಂದು ಹೇಳಿರುವ ಬಾಂಬೆ ಉಚ್ಚ ನ್ಯಾಯಾಲಯದ ಔರಂಗಾಬಾದ್ ಪೀಠವು, ಮಾರ್ಚ್ ತಿಂಗಳಲ್ಲಿ ದಿಲ್ಲಿಯ ನಿಝಾಮುದ್ದೀನ್‌ ನಲ್ಲಿ ನಡೆದಿದ್ದ ಮರ್ಕಝ್ ಸಮಾವೇಶದಲ್ಲಿ ಭಾಗವಹಿಸಿದ್ದ ಹಲವಾರು ವಿದೇಶಿ ತಬ್ಲೀಗಿ ಸದಸ್ಯರ ವಿರುದ್ಧ ಮಹಾರಾಷ್ಟ್ರದಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಗಳನ್ನು ರದ್ದುಗೊಳಿಸಿದೆ.

ಕೋರ್ಟ್ ತೀರ್ಪಿನ ಮುಖ್ಯಾಂಶಗಳು ಇಲ್ಲಿವೆ

►ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳಲ್ಲಿ ತೊಡಗಿದ್ದ ಭಾರತೀಯ ಮುಸ್ಲಿಮರಿಗೆ ಪರೋಕ್ಷ ಎಚ್ಚರಿಕೆ ನೀಡಲು ವಿದೇಶಿ ಪ್ರಜೆಗಳ ಸಾಮೂಹಿಕ ಅಪರಾಧೀಕರಣವನ್ನು ಮಾಡಲಾಯಿತು ಎಂದು ನ್ಯಾಯಮೂರ್ತಿಗಳಾದ ಟಿ.ವಿ.ನಲವಡೆ ಮತ್ತು ಎಂ.ಜಿ.ಸೆವ್ಲಿಕರ್‌ ಅವರ ವಿಭಾಗೀಯ ಪೀಠವು ಹೇಳಿತು.

►ದುರುದ್ದೇಶದಿಂದ ಈ ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು

► ಜನವರಿ 2020ಕ್ಕೂ ಮೊದಲಿನಿಂದಲೂ ದೇಶದ ಹಲವೆಡೆಗಳಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದವು. ದಿಲ್ಲಿಯಲ್ಲಿ ಮಾತ್ರವಲ್ಲ, ಹೆಚ್ಚಿನ ರಾಜ್ಯಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳಾಗುತ್ತಿದ್ದವು. ಸರಕಾರದ ಕ್ರಮದಿಂದಾಗಿ ಮುಸ್ಲಿಮರ ಮನದಲ್ಲಿ ಭೀತಿಯು ಸೃಷ್ಟಿಯಾಗಿತ್ತು ಎಂದು ಹೇಳಬಹುದಾಗಿದೆ. ಈ ಅಪಪ್ರಚಾರವು ಮುಸ್ಲಿಮರ ವಿರುದ್ಧ ಯಾವುದೇ ರೂಪದಲ್ಲಿ ಮತ್ತು ಯಾವುದೇ ಕಾರಣಕ್ಕೆ ಕ್ರಮವನ್ನು ಕೈಗೊಳ್ಳಬಹುದು ಎಂಬ ಪರೋಕ್ಷ ಎಚ್ಚರಿಕೆಯನ್ನು ನೀಡುವ ಉದ್ದೇಶವನ್ನು ಹೊಂದಿತ್ತು.

►ಇತರ ದೇಶಗಳ ಮುಸ್ಲಿಮರ ವಿರುದ್ಧ ಸಂಬಂಧವನ್ನು ಇರಿಸಿಕೊಂಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎನ್ನುವ ಎಚ್ಚರಿಕೆಯನ್ನು ಈ ಮೂಲಕ ನೀಡಲಾಯಿತು.

►ಮಹಾರಾಷ್ಟ್ರ ಪೊಲೀಸರು ಯಾಂತ್ರಿಕವಾಗಿ ಕಾರ್ಯ ನಿರ್ವಹಿಸಿರುವುದು ಸ್ಪಷ್ಟವಾಗಿದೆ. ರಾಜ್ಯ ಸರಕಾರವು ರಾಜಕೀಯ ಅನಿವಾರ್ಯತೆಗಳಡಿ ಕ್ರಮವನ್ನು ಕೈಗೊಂಡಿದ್ದಂತೆ ಕಂಡುಬರುತ್ತಿದೆ ಮತ್ತು ಪೊಲೀಸರು ಕೂಡ ಕಾನೂನುಗಳು ತಮಗೆ ನೀಡಿರುವ ಅಧಿಕಾರವನ್ನು ಬಳಸಿಕೊಳ್ಳುವ ಧೈರ್ಯವನ್ನು ಮಾಡಿರಲಿಲ್ಲ. ಪೊಲೀಸರು ತಮ್ಮ ವಿವೇಚನೆಯನ್ನು ಬಳಸಿರಲಿಲ್ಲ ಎಂದು ದಾಖಲೆಗಳು ತೋರಿಸುತ್ತವೆ ಮತ್ತು ಇದೇ ಕಾರಣದಿಂದ ಮೇಲ್ನೋಟಕ್ಕೆ ಆರೋಪಗಳನ್ನು ಸಾಬೀತುಗೊಳಿಸಲು ಯಾವುದೇ ದಾಖಲೆಗಳಿಲ್ಲದಿದ್ದರೂ ಪೊಲೀಸರು ಆರೋಪ ಪಟ್ಟಿಗಳನ್ನು ಸಲ್ಲಿಸಿದ್ದಾರೆ.

►ಒಂದೇ ರೀತಿಯ ಅಪರಾಧಗಳ ಆರೋಪವಿದ್ದರೂ ವಿವಿಧ ರಾಜ್ಯಗಳ ಪೊಲೀಸರು ಪ್ರಕರಣಗಳನ್ನು ದಾಖಲಿಸುವಾಗ ವಿಭಿನ್ನ ನಿಲುವುಗಳನ್ನು ಅನುಸರಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಎಫ್‌ಐಆರ್‌ ಗಳು ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ ಅಥವಾ ಐಪಿಸಿಯ ಕಲಮ್‌ ಗಳನ್ನಷ್ಟೇ ಉಲ್ಲೇಖಿಸಲಾಗಿದ್ದರೆ, ಇನ್ನು ಕೆಲವು ಪ್ರಕರಣಗಳಲ್ಲಿ ಪೊಲೀಸರು ವಿದೇಶಿಯರ ಕಾಯ್ದೆಯ ಕಲಮ್‌ಗಳನ್ನು ಹೇರಿದ್ದಾರೆ.

►ತನ್ನೆದುರು ಇರುವ ದಾಖಲೆಗಳಂತೆ ತಬ್ಲೀಗಿ ಜಮಾಅತ್ ಮುಸ್ಲಿಮರ ಪ್ರತ್ಯೇಕ ಪಂಥವಲ್ಲ, ಅದು ಧಾರ್ಮಿಕ ಸುಧಾರಣೆಗಳಿಗಾಗಿ ಒಂದು ಆಂದೋಲನ ಮಾತ್ರವಾಗಿದೆ. ಅದೇನೇ ಇದ್ದರೂ, ವಿದೇಶಿಯರು ಇತರ ಧರ್ಮಗಳ ಜನರನ್ನು ಇಸ್ಲಾಮ್‌ ಗೆ ಮತಾಂತರಿಸುವ ಮೂಲಕ ಆ ಧರ್ಮದ ಪ್ರಸಾರದಲ್ಲಿ ತೊಡಗಿದ್ದರು ಎನ್ನುವುದನ್ನು ದಾಖಲೆಗಳಿಂದಲೂ ನಿರ್ಧರಿಸಲು ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News