×
Ad

ಕೃಷಿ ಪದವಿ ಪರೀಕ್ಷೆಗೆ ಬದಲು ಸಿಇಟಿ ರ‍್ಯಾಂಕಿಂಗ್‌ ಆಧಾರದ ಮೇಲೆ ಸೀಟು ಹಂಚಿಕೆ: ಸಚಿವ ಬಿ.ಸಿ.ಪಾಟೀಲ್

Update: 2020-08-23 23:03 IST

ಬೆಂಗಳೂರು, ಆ. 24: ಕೋವಿಡ್-19 ಕಾರಣ ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್)ನಿಯಮದಂತೆ, ರಾಜ್ಯದಲ್ಲಿ ಕೃಷಿ ಪದವಿಯ ದಾಖಲಾತಿಗೆ ಪರೀಕ್ಷೆಯ ಬದಲಾಗಿ ಸಿಇಟಿ ರ‍್ಯಾಂಕಿಂಗ್‌ ಆಧಾರದ ಮೇಲೆ ಕೃಷಿಕರ ಮಕ್ಕಳು ಹಾಗೂ ಕೃಷಿ ಕಾರ್ಮಿಕರ ಕೋಟಾದಡಿ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಹಂಚಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ಪರಿಸ್ಥಿತಿಯಲ್ಲಿ ಸರಕಾರವು ರೈತರ ಆರೋಗ್ಯ ಹಾಗೂ ಹಿತರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿದ್ದು, ಸಾವಿರಾರು ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಸ್ವತಃ ಹಾಜರಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಸರಕಾರದ ನಿರ್ದೇಶನದಂತೆ ಸುರಕ್ಷಿತ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸುವುದು ಕಷ್ಟ ಸಾಧ್ಯ. ಆದುದರಿಂದ ಕೃಷಿ ಪದವಿಯ ದಾಖಲಾತಿಗೆ ನಡೆಸಲಾಗುವ ಪ್ರಾಯೋಗಿಕ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದಿದ್ದಾರೆ. ಕೃಷಿಕರ ಕೋಟಾದ ಅಡಿಯಲ್ಲಿ ಶೇ.40ರಷ್ಟು ಸೀಟುಗಳು ಕೃಷಿಕರ ಮಕ್ಕಳಿಗೆ ಮೀಸಲಿರುವುದರಿಂದ ನೈಜ ಕೃಷಿಕರ ಮಕ್ಕಳು ಮಾತ್ರ ಕೃಷಿಕರ ಕೋಟಾದಲ್ಲಿ ಸೀಟುಗಳನ್ನು ಪಡೆದುಕೊಳ್ಳುವಂತೆ ಮಾಡಲು ಸರ್ವ ನಿಬಂಧನೆಗಳನ್ನು ಸಿದ್ದಪಡಿಸಲಾಗಿದೆ. ಇದರಿಂದ ಕೃಷಿಕರ ಮಕ್ಕಳಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ ಎಂದು ಅವರು ಖಾತ್ರಿಪಡಿಸಿದ್ದಾರೆ.

ಸಮಾಜದ ಪ್ರತಿ ಸಮುದಾಯವೂ ಈ ರದ್ದತಿಯನ್ನು ತೆರೆದ ಮನದಿಂದ ಸ್ವಾಗತಿಸಿದೆ. ಕೃಷಿ ಸಮಾಜದ ಉದ್ಧಾರಕ್ಕಾಗಿ ತೆಗೆದುಕೊಳ್ಳಲಾದ ನಿರ್ಧಾರಗಳನ್ನು ಸ್ವಾಗತಿಸಿದ್ದಕ್ಕಾಗಿ ಸಚಿವ ಬಿ.ಸಿ.ಪಾಟೀಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News