ಬಾರ್, ರೆಸ್ಟೋರೆಂಟ್ ಆರಂಭಕ್ಕೆ ಅನುಮತಿ ವಿಚಾರ: ಅಬಕಾರಿ ಇಲಾಖೆ ಅಧಿಕಾರಿಗಳ ಸಭೆ
ಬೆಂಗಳೂರು, ಆ.24: ಬಾರ್ ಮತ್ತು ರೆಸ್ಟೋರೆಂಟ್ ಮಾಲಕರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಚಿಲ್ಲರೆ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ದಿಲ್ಲಿ, ಚಂಡೀಗಢ ಮತ್ತು ಪಂಜಾಬ್ ರಾಜ್ಯಗಳಲ್ಲಿ ಚಿಲ್ಲರೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದೇ ಮಾದರಿಯಲ್ಲಿ ಸೆಪ್ಟೆಂಬರ್ 1ರಿಂದ ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.
ಬಾರ್, ರೆಸ್ಟೋರೆಂಟ್ ಹಾಗೂ ಕ್ಲಬ್‍ಗಳಲ್ಲಿ ಮದ್ಯ ಮಾರಾಟ ಬಂದ್ ಆಗಿರುವುದರಿಂದ ಸರಕಾರಕ್ಕೆ ಮಾತ್ರ ಕೋಟ್ಯಂತರ ರೂ.ಆದಾಯ ಕೊರತೆಯಾಗಿದೆ. ಜತೆಗೆ, ಮಾಲಕರಿಗೂ ಕೋಟ್ಯಂತರ ರೂ. ನಷ್ಟವುಂಟಾಗಿದೆ. ಪ್ರತಿ ತಿಂಗಳು ಕನಿಷ್ಠ 20ರಿಂದ 30 ಸಾವಿರ ರೂ. ಬಾಡಿಗೆ ಪಾವತಿಸಬೇಕು. ಕೆಲಸ ಮಾಡುವ ಸಿಬ್ಬಂದಿಗೆ (ಕನಿಷ್ಠ 10 ಮಂದಿ) ವೇತನ ಪಾವತಿಸಬೇಕು. ಅಲ್ಲದೆ, ಲಕ್ಷಾಂತರ ರೂಪಾಯಿಗಳನ್ನು ಸನ್ನದು ಶುಲ್ಕವಾಗಿ ಸರಕಾರಕ್ಕೆ ಪಾವತಿಸಬೇಕು. ಬೆಂಗಳೂರಿನಂತಹ ನಗರಗಳಲ್ಲಿ ವರ್ಷಕ್ಕೆ 10ರಿಂದ 15 ಲಕ್ಷ ರೂ. ಸನ್ನದು ಶುಲ್ಕ ಕಟ್ಟಬೇಕು. ಹೀಗೆ ಒಟ್ಟಾರೆ ಐದು ತಿಂಗಳಿಂದ ತಿಂಗಳಿಗೆ ಕನಿಷ್ಠವೆಂದರೂ 2ರಿಂದ 3 ಲಕ್ಷ ರೂ. ಲುಕ್ಸಾನು ಆಗುತ್ತಿದೆ ಎಂದು ಮಾಲಕರೊಬ್ಬರು ವಿವರಿಸಿದ್ದಾರೆ.
ಈ ನಷ್ಟದ ಹೊಡೆತಕ್ಕೆ ನಲುಗಿರುವ ಕೆಲವು ಬಾರ್ ಮಾಲಕರು ಸನ್ನದು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ಇನ್ನೂ ಕೆಲವರು ಹೇಗಾದರೂ ಮಾಡಿ ಲೈಸೆನ್ಸ್ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎನ್ನುತ್ತಾರೆ ಅಬಕಾರಿ ಉದ್ಯಮಿಗಳು.
ಎಂಆರ್‍ಪಿ ಮಳಿಗೆಗಳಾಗಿ ಪರಿವರ್ತನೆ: ಆಹಾರದ ಜತೆ ಚಿಲ್ಲರೆ ಮದ್ಯ ಮಾರಾಟಕ್ಕೆ ನಿರ್ಬಂಧ ಇರುವುದರಿಂದ ಗ್ರಾಹಕರನ್ನು ಸೆಳೆಯಲು ಬಹುತೇಕ ಬಾರ್ ಗಳ ಮಾಲಕರು, ಇತ್ತೀಚಿನ ದಿನಗಳಲ್ಲಿ ಎಂಆರ್‍ಪಿ ದರದಲ್ಲಿ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಬಾರ್ ಗಳ ಮುಂದೆ ಎಂಆರ್‍ಪಿ ದರದಲ್ಲಿ ಮದ್ಯ ಲಭ್ಯ ಎಂಬ ಬೋರ್ಡ್ ಗಳು ಎಲ್ಲೆಡೆ ರಾರಾಜಿಸತೊಡಗಿವೆ.
ರಾಜ್ಯ ಸರಕಾರ ಕೆಲವು ಷರತ್ತುಗಳನ್ನು ವಿಧಿಸಿ ಮೊದಲಿನಂತೆ ಮದ್ಯ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಹುದು. ಆದರೆ ಅದರ ಬದಲು ಆನ್‍ಲೈನ್ ಮದ್ಯ ಮಾರಾಟ, ಹೊಸದಾಗಿ ಎಂಎಸ್‍ಐಎಲ್ ಮಳಿಗೆಗಳ ಆರಂಭ ಮತ್ತಿತರ ವಿಷಯಗಳಿಗೆ ಹೆಚ್ಚಿನ ಆಸಕ್ತಿ ತೋರುತ್ತಿದೆ. ಬಾರ್ ಮಾಲಕರಿಗೆ ಆಗುತ್ತಿರುವ ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಮದ್ಯ ಮಾರಾಟ ಸಂಘದ ಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿದ್ದಾರೆ.