ಬಸವೇಶ್ವರ ಪುತ್ಥಳಿ: ನಾಮಫಲಕದಲ್ಲಿ ಮಾಜಿ ಮೇಯರ್ ಗಂಗಾಂಬಿಕೆ ಹೆಸರು ನಮೂದಿಸಲು ಸೂಚನೆ
Update: 2020-08-24 22:14 IST
ಬೆಂಗಳೂರು, ಆ.24: ಜಗಜ್ಯೋತಿ ಬಸವೇಶ್ವರ ಅಶ್ವಾರೂಢ ಪುತ್ಥಳಿಯ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆ ಶಿಲಾನ್ಯಾಸ ಫಲಕದಲ್ಲಿ ಮಾಜಿ ಮೇಯರ್ ಗಂಗಾಂಬಿಕೆ ಅವರ ಹೆಸರು ನಮೂದಿಸಲು ಶಿಷ್ಟಾಚಾರ ನಿಯಮದಲ್ಲಿ ಅವಕಾಶವಿದ್ದರೆ ಅಗತ್ಯ ಕ್ರಮ ವಹಿಸುವಂತೆ ಮೇಯರ್ ಗೌತಮ್‍ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಸವೇಶ್ವರ ಪುತ್ಥಳಿಯ ನಾಮಫಲಕದಲ್ಲಿ ಮಾಜಿ ಮೇಯರ್ ಗಂಗಾಂಬಿಕೆ ಹೆಸರಿಲ್ಲದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಕುರಿತು ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜೀದ್ ಅವರು, ಮೇಯರ್‍ಗೆ ಪತ್ರ ಬರೆದು ಗಂಗಾಂಬಿಕೆ ಹೆಸರು ನಮೂದಿಸಲು ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ಮೇಯರ್ ಗೌತಮ್‍ಕುಮಾರ್ ಅವರು ಆಯುಕ್ತರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದು ಕಾಂಗ್ರೆಸ್ ಪಕ್ಷದ ಮನವಿ ಮೇರೆಗೆ ಗಂಗಾಂಬಿಕೆ ಅವರ ಹೆಸರು ನಮೂದಿಸುವಂತೆ ಸೂಚಿಸಿದ್ದಾರೆ.