ಕೊರೋನ ಭ್ರಷ್ಟಾಚಾರ ಆರೋಪ: ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು. ಆ25: ರಾಜ್ಯ ಬಿಜೆಪಿ ಸರಕಾರ ಕೋವಿಡ್-19 ಹೆಸರಿನಲ್ಲಿ ಕೋಟ್ಯಂತರ ಹಣವನ್ನು ವಸೂಲಿ ಮಾಡಿ, ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಮೌರ್ಯ ವೃತ್ತದ ಮುಂಭಾಗ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ದಿಂಬು, ಹಾಸಿಗೆ, ವೆಂಟಿಲೇಟರ್ ನಲ್ಲಿ ಸಂಬಂಧಪಟ್ಟವರು ಹಣ ಗಳಿಕೆಯಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಕೊರೋನ ನೆಪದಲ್ಲಿ ರಾಜ್ಯದ ಜನರ ಹಣವನ್ನು ನಿರಂತರವಾಗಿ ಲೂಟಿ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ವಿರೋಧ ಪಕ್ಷಗಳು ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಿವೆ ಎಂಬ ಆಧಾರರಹಿತ ಹೇಳಿಕೆಯನ್ನು ನೀಡುತ್ತಿರುವ ರಾಜ್ಯ ಸರಕಾರವು, ರಾಜ್ಯದ ಜನತೆಗೆ ಭ್ರಷ್ಟಾಚಾರದ ಬಗ್ಗೆ ಬಹಿರಂಗಪಡಿಸಬೇಕು ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್.ಮನೋಹರ್, ಜಿ.ಜನಾರ್ಧನ್, ಎ.ಆನಂದ್ ಸೇರಿದಂತೆ ಪ್ರಮುಖರಿದ್ದರು.