ನೆರೆ ರಾಜ್ಯಗಳ ಅನುಮತಿ ಸಿಕ್ಕಿದೊಡನೆ ಸಾರಿಗೆ ಸಂಚಾರ ಪ್ರಾರಂಭ: ಲಕ್ಷ್ಮಣ್ ಸವದಿ

Update: 2020-08-25 12:34 GMT

ಬೆಂಗಳೂರು, ಆ.25: ದೇಶಾದ್ಯಂತ ಕೋವಿಡ್ ಲಾಕ್‍ಡೌನ್ ಸಡಿಲಗೊಂಡಿರುವುದರಿಂದ ನಮ್ಮ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಗೋವಾ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಗೆ ಸಾರಿಗೆ ಸಂಚಾರ ಆರಂಭಿಸಲು ಕೆಎಸ್ಸಾರ್ಟಿಸಿ ಸಿದ್ಧತೆ ಮಾಡಿಕೊಂಡಿದ್ದು, ನೆರೆ ರಾಜ್ಯಗಳ ಅನುಮತಿಗೆ ಕಾಯುತ್ತಿದ್ದೇವೆಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಆಂಧ್ರಪ್ರದೇಶಕ್ಕೆ ರಾಜ್ಯದ ಸಾರಿಗೆ ಬಸ್‍ಗಳು ಸಂಚಾರ ಪ್ರಾರಂಭಿಸಿವೆ. ಈಗ ಸಾರ್ವಜನಿಕರ ಬೇಡಿಕೆಗಳ ಮೇರೆಗೆ ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ಬಸ್‍ಸಂಚಾರ ಪ್ರಾರಂಭಿಸುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ನಮ್ಮ ಸಾರಿಗೆ ಇಲಾಖೆಯಿಂದ ಆಯಾ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಸಾರಿಗೆ ಇಲಾಖೆಗಳು ಅಗತ್ಯ ಸಿದ್ಧತೆಗಳು ಮಾಡಿಕೊಳ್ಳಬೇಕಾಗುತ್ತದೆ. ಈ ಎಲ್ಲ ರಾಜ್ಯಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಆಧರಿಸಿ ಪುನಃ ಬಸ್‍ಸಂಚಾರ ಪ್ರಾರಂಭಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ. ಈ  ಬಗ್ಗೆ ಸಾರ್ವಜನಿಕರಿಂದಲೂ ಸೂಕ್ತ ಸಹಕಾರ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News