ವಸತಿ ಸಮುಚ್ಚಯಗಳ ಹಂಚಿಕೆಯಲ್ಲಿ ಸೋಮಣ್ಣ, ಅರವಿಂದ ಲಿಂಬಾವಳಿ ಗೋಲ್ ಮಾಲ್: ಆಪ್ ಆರೋಪ

Update: 2020-08-25 12:57 GMT

ಬೆಂಗಳೂರು, ಆ.25: ವಸತಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಅರವಿಂದ ಲಿಂಬಾವಳಿ ಬೆಂಗಳೂರು ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದ ಕೊಡತಿಯಲ್ಲಿ ರಾಜೀವ್ ಗಾಂಧಿ ಗೃಹ ನಿರ್ಮಾಣ ನಿಗಮದಿಂದ ನಿರ್ಮಿಸಲ್ಪಟ್ಟಿರುವ ವಸತಿ ಸಮುಚ್ಚಯಗಳಲ್ಲಿ ತಮ್ಮ ಹಿಂಬಾಲಕರಿಗೆ ಮನೆಗಳನ್ನು ಕೊಡಿಸಲು ವ್ಯವಸ್ಥಿತ ಗೋಲ್ ಮಾಲ್ ನಡೆಸುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಯಾವುದೇ ವಿಧಾನಮಂಡಲದ ಸದನಗಳಲ್ಲಿ ಚರ್ಚೆಯನ್ನೂ ನಡೆಸದೆ ಸೋಮಣ್ಣ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ‘ಆಯಾ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಶೇ.50ರಷ್ಟು ಮೊದಲ ಆದ್ಯತೆ’ ಎನ್ನುವ ಅನೈತಿಕ, ಸಂವಿಧಾನ ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಕೊಡಮಾಡಿರುವ ವಸತಿ ಹಕ್ಕಿಗೆ ವಿರುದ್ಧವಾಗಿ, ಜನವಿರೋಧಿ ತಿದ್ದುಪಡಿಯನ್ನು ತಂದಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ದೂರಿದ್ದಾರೆ.

ಅಧಿಕಾರಿಗಳ ಮಟ್ಟದಲ್ಲಿ ತೆಗೆದುಕೊಂಡಿರುವ ಈ ನಿರ್ಣಯವು ತಮ್ಮ ಹಿಂಬಾಲಕರಿಗೆ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಅನುಕೂಲ ಆಗುವಂತಹ ನಿರ್ಣಯ ಎಂಬುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಈ ನಿರ್ಣಯವು ಚುನಾವಣಾ ಅಕ್ರಮಗಳ ಮುಂದುವರಿದ ಭಾಗವೆಂದು ಹೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹಿಂದಿನ ಸರಕಾರದಲ್ಲಿ ಶಾಸಕ ಅರವಿಂದ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಾಡೋಸಿದ್ದಾಪುರ ಗ್ರಾಮದಲ್ಲಿ 9 ಎಕರೆ 21 ಗುಂಟೆ, ಸೂಲಿಕುಂಟೆ ಗ್ರಾಮದಲ್ಲಿ 10 ಎಕರೆ, ಕಣ್ಣೂರು ಗ್ರಾಮದಲ್ಲಿ 9 ಎಕರೆ 20 ಗುಂಟೆ, ಕೊಡತಿಯಲ್ಲಿ 5 ಎಕರೆ, ಮಂಡೂರು ಗ್ರಾಮದಲ್ಲಿ 2 ಎಕರೆ 16 ಗುಂಟೆ, ಬಯ್ಯಪ್ಪನಹಳ್ಳಿ ಗ್ರಾಮದಲ್ಲಿ 5 ಎಕರೆ, ಎನ್.ಜಿ.ಗೊಲ್ಲಹಳ್ಳಿಯಲ್ಲಿ 34 ಗುಂಟೆ ಜಮೀನು, ಹೀಗೆ 43.11 ಎಕರೆ ಪ್ರದೇಶವನ್ನು ವಿವಿಧ  ಯೋಜನೆಯಡಿ ರಾಜ್ಯದ ಎಲ್ಲ ಬಡವರಿಗೆ, ವಸತಿ ರಹಿತರಿಗೆ, ನಿವೇಶನ ರಹಿತರಿಗೆ ಬಹುಕಾಲದ ವಸತಿ ಸೌಲಭ್ಯವನ್ನು ನೀಡುವಂತಹ ಯೋಜನೆಗಳನ್ನು ರೂಪಿಸಲಾಗಿತ್ತು ಎಂದು ಜಗದೀಶ್ ತಿಳಿಸಿದ್ದಾರೆ.

ಇದಕ್ಕಾಗಿ ಫಲಾನುಭವಿಗಳಿಂದ ನೂರಾರು ಕೋಟಿ ರೂ.ಗಳನ್ನು ಕಟ್ಟಿಸಿಕೊಂಡು ಕಳೆದ 10 ವರ್ಷಗಳಿಂದ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಹಂಚುವ ಪ್ರಕ್ರಿಯೆ ಪ್ರಾರಂಭವಾಗಿದೆ. 10 ವರ್ಷಗಳಿಂದ ಬಕ ಪಕ್ಷಿಗಳಂತೆ ಕಾದು ಇನ್ನೇನು ವಾಸಿಸಲು ಅವರಿಗೆ ಒಪ್ಪಿಸುವ ಸಮಯದಲ್ಲಿ ಸೋಮಣ್ಣ ಹಾಗೂ ಅರವಿಂದ ಲಿಂಬಾವಳಿ ರಾಜ್ಯದ ಎಲ್ಲ ಬಡವರಿಗೆ ಸೂರು ನೀಡುವ ಕಾರ್ಯಕ್ರಮ ಎಂಬುದನ್ನು ಮರೆತು ತಮ್ಮ ಹಿಂಬಾಲಕರ ಋಣ ತೀರಿಸಲು ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಉತ್ತೇಜನ ನೀಡುವಂತಹ ಈ ರೀತಿಯ ತಿದ್ದುಪಡಿಗಳನ್ನು ಕೇವಲ ಅಧಿಕಾರಿಗಳ ಮಟ್ಟದಲ್ಲೇ ತೆಗೆದುಕೊಂಡಿರುವುದು ತೀರಾ ದುರದೃಷ್ಟಕರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರವಿಂದ ಲಿಂಬಾವಳಿ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುವ ಕೊಡತಿಯಲ್ಲಿ ನಿರ್ಮಾಣ ಆಗಿರುವ ವಸತಿ ಸಮುಚ್ಚಯದಲ್ಲಿ 74 ಮಾಜಿ ಯೋಧರು ಸೇರಿದಂತೆ ಅರ್ಹರಿಗೆ ವಸತಿ ಸೌಲಭ್ಯ ಒದಗಿಸಲು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಹತ್ತು ವರ್ಷಗಳಿಂದ ಸತಾಯಿಸುತ್ತಿದ್ದಾರೆ ಎಂದು ಜಗದೀಶ್ ಕಿಡಿಗಾರಿದ್ದಾರೆ.

ಕೂಡಲೇ ವಸತಿ ಇಲಾಖೆಯ ಈ ತಿದ್ದುಪಡಿಯನ್ನು ಮುಖ್ಯಮಂತ್ರಿಗಳು ರದ್ದುಪಡಿಸಿ ಈಗಾಗಲೇ ಅರ್ಹರಿಗೆ ಹಂಚಿಕೆಯಾಗಿ ನೋಂದಣಿಯೂ ಆಗಿರುವ   ವಸತಿ ಗೃಹಗಳನ್ನು ಅವರುಗಳು ವಾಸಿಸಲು ಅವರ ಕೈಗೊಪ್ಪಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News