ವ್ಯಕ್ತಿಯ ಅಪಹರಿಸಿ ಲಕ್ಷಾಂತರ ರೂ. ಸುಲಿಗೆ ಆರೋಪ: ಬೆಂಗಳೂರಿನಲ್ಲಿ ಪಿಎಸ್ಸೈ ಸೇರಿ ಇಬ್ಬರ ಬಂಧನ

Update: 2020-08-25 13:57 GMT

ಬೆಂಗಳೂರು, ಆ.25: ಅಡಿಕೆ ಮಾರಾಟದ ಹಣವನ್ನು ತೆಗೆದುಕೊಂಡು ತೆರಳಿದ್ದ ವ್ಯಕ್ತಿಯೋರ್ವನನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡಿದ್ದ ಆರೋಪದಡಿ ಪಿಎಸ್ಸೈ ಸೇರಿ ಇಬ್ಬರನ್ನು ಇಲ್ಲಿನ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್.ಜೆ.ಪಾರ್ಕ್ ಠಾಣೆಯ ಪಿಎಸ್ಸೈ ಜೀವನ್‍ ಕುಮಾರ್ ಹಾಗೂ ಪತ್ರಿಕೆಯೊಂದರ ವರದಿಗಾರ ಎನ್ನಲಾದ ಜ್ಞಾನಪ್ರಕಾಶ್(44) ಎಂಬವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ತುಮಕೂರಿನ ಶಿವಕುಮಾರ್ ಎಂಬವರು ತಮ್ಮ ಮಾಲಕ ಮೋಹನ್ ಮಾತಿನಂತೆ ಚಿಕ್ಕಪೇಟೆಯಲ್ಲಿರುವ ಭರತ್ ಎಂಬವರ ಬಳಿ ಅಡಿಕೆ ಮಾರಾಟದ 26.50 ಲಕ್ಷ ರೂ.ಪಡೆದುಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಹಣ ಪಡೆದ ಶಿವಕುಮಾರ್, ಊರಿಗೆ ವಾಪಸು ಹೋಗಲು ಚಿಕ್ಕಪೇಟೆಯ ಮೆಟ್ರೊ ನಿಲ್ದಾಣ ಬಳಿ ನಿಂತಿದ್ದರು. ಅದೇ ವೇಳೆಗೆ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಶಿವಕುಮಾರ್ ಅವರನ್ನು ಕಾರಿನಲ್ಲಿ ಅಪಹರಿಸಿದ್ದರು ಎನ್ನಲಾಗಿದೆ.

ಕಾರಿನಲ್ಲೇ ಹಣ ಸುಲಿಗೆ ಮಾಡಿದ್ದ ಆರೋಪಿಗಳು, ಲಾಲ್‍ಬಾಗ್ ಬಳಿಯ ಹೋಟೆಲೊಂದರ ಬಳಿ ಶಿವಕುಮಾರ್ ಅವರನ್ನು ಇಳಿಸಿ ಪರಾರಿಯಾಗಿದ್ದರು. ಈ ಸಂಬಂಧ ಶಿವಕುಮಾರ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ತನಿಖೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ, ಆರೋಪಿಗಳಿಬ್ಬರು ಅಳಿಯ-ಮಾವ ಎನ್ನಲಾಗಿದ್ದು, ಒಟ್ಟಿಗೆ ಸೇರಿ ಸಂಚು ರೂಪಿಸಿ ಕೃತ್ಯ ಎಸಗಿದ್ದರು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News