ಬೆಂಗಳೂರು ಹಿಂಸಾಚಾರ ಪ್ರಕರಣ: ಸಂಪತ್‍ ರಾಜ್ 2ನೇ ಬಾರಿಗೆ ವಿಚಾರಣೆ ಸಾಧ್ಯತೆ

Update: 2020-08-25 17:07 GMT
ಸಂಪತ್‍ರಾಜ್

ಬೆಂಗಳೂರು, ಆ.25: ಬೆಂಗಳೂರು ಹಿಂಸಾಚಾರ ಪ್ರಕರಣ ಸಂಬಂಧ ಬಿಬಿಎಂಪಿ ಮಾಜಿ ಮೇಯರ್ ಸಂಪತ್‍ರಾಜ್, ಸದಸ್ಯ ಎ.ಆರ್.ಝಾಕೀರ್ ಅವರನ್ನು ಎರಡನೇ ಬಾರಿಗೆ ಸಿಸಿಬಿ ವಿಚಾರಣೆ ನಡೆಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಸಂಪತ್‍ ರಾಜ್ ಹಾಗೂ ಝಾಕೀರ್ ಅವರನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿತ್ತು. ಗಲಭೆ ದಿನದಿಂದ ಹಲವರೊಂದಿಗೆ ಇಂಟರ್‍ನೆಟ್ ಕರೆ ಹಾಗೂ ವಾಟ್ಸ್ ಆ್ಯಪ್ ಮಾಡಿದ್ದ ಶಂಕೆ ಹಿನ್ನೆಲೆ, ಡೇಟಾ ರಿಟ್ರೈವ್ ಮಾಡಲು ಇಬ್ಬರ ಮೊಬೈಲ್‍ಗಳನ್ನು ಎಫ್‍ಎಸ್‍ಎಲ್ ಕೇಂದ್ರಕ್ಕೆ ರವಾನಿಸಿತ್ತು. ಇದರ ವರದಿ ಕೈಸೇರುತ್ತಿದ್ದಂತೆ ಮತ್ತಷ್ಟು ವಿಚಾರಣೆಗಾಗಿ ಇಬ್ಬರನ್ನೂ ಕರೆಯಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಸಂಪತ್‍ರಾಜ್ ಅವರ ಸಂಬಂಧಿ ಎನ್ನಲಾದ ಆರೋಪಿ ಅರುಣ್‍ಕುಮಾರ್ ಅನ್ನು ಐದು ದಿನಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಈ ಹಿನ್ನೆಲೆ ಸಿಸಿಬಿ ಪೊಲೀಸರು ಅರುಣ್‍ನನ್ನು ಸಂಜೆವರೆಗೂ ತೀವ್ರ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಮೊಬೈಲ್‍ನಲ್ಲಿ ಕೆಲ ಕರೆಗಳ ಕುರಿತು ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಶಾಸಕರ ಮನೆ ಮೇಲಿನ ದಾಳಿ ಸಂಬಂಧ ವಿಚಾರಣೆ ಮಾಡಲಿದ್ದಾರೆ. ಅಷ್ಟೇ ಅಲ್ಲದೆ, ಈತನನ್ನು ಕೋರ್ಟಿಗೆ ಹಾಜರುಪಡಿಸಿ ನಂತರ ಮತ್ತೆ, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಠಾಣೆಗೆ ಹಾನಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಕಸ್ಟಡಿಗೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಅರುಣ್ ಹಿನ್ನೆಲೆ: ತಮಿಳುನಾಡಿನ ಹೊಸೂರು ಭಾಗದ ಅರುಣ್‍ ಕುಮಾರ್, ಬೆಂಗಳೂರಿನ ಮೇಯರ್ ಆಗಿದ್ದ ಸಂಪತ್‍ರಾಜ್ ಸಂಬಂಧಿಕ ಕೂಡ. ಕಳೆದ ಒಂಬತ್ತು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಈತ 2018ರಲ್ಲಿ ಕ್ಲಾಸ್ 3ನೇ ಕಂಟ್ರಾಕ್ಟರ್ ಆಗಿದ್ದ. ಅಷ್ಟೇ ಅಲ್ಲದೆ, ಈತನ ಬಳಿಯಿದ್ದ ಮೊಬೈಲ್ ನಲ್ಲಿ ಯುವತಿಯರ ಫೋಟೋ, ಕೆಲ ಅಶ್ಲೀಲ ಚಿತ್ರಗಳು ವಿಚಾರಣೆಯಲ್ಲಿ ಬೆಳಕಿಗೆ ಬಂದಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News