ಸುಗಂಧ ದ್ರವ್ಯಗಳನ್ನು ಬಳಸುತ್ತೀರಾ? ಹಾಗಿದ್ದರೆ ಅದರ ಅಡ್ಡಪರಿಣಾಮಗಳೂ ನಿಮಗೆ ಗೊತ್ತಿರಲಿ

Update: 2020-08-26 12:31 GMT

ಹೆಣ್ಣಿರಲಿ ಅಥವಾ ಗಂಡಿರಲಿ,ಮನೆಯಿಂದ ಹೊರಬೀಳುವಾಗ ಇಷ್ಟದ ಸುಗಂಧ ದ್ರವ್ಯವನ್ನು ಶರೀರಕ್ಕೆ ಪೂಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ನಿಮ್ಮ ಇಷ್ಟದ ಸುಗಂಧ ದ್ರವ್ಯ ಹಲವಾರು ಆರೋಗ್ಯ ಸಮಸ್ಯೆಗಳಿಗೆ ತನ್ನ ಪಾಲು ಸಲ್ಲಿಸುತ್ತಿರಬಹುದು. ಸುಗಂಧ ದ್ರವ್ಯಗಳು ಮತ್ತು ಪರಿಮಳ ಕಣ್ಣಿನಲ್ಲಿ ನೀರು ಬರುವಂತೆ ಮತ್ತು ಸೀನುವಂತೆ ಮಾಡಬಹುದು ಮತ್ತು ಇವು ಸೌಮ್ಯ ಅಲರ್ಜಿಗಳಾಗಿವೆ. ಆದರೆ ರಾಸಾಯನಿಕಗಳನ್ನು ಒಳಗೊಂಡಿರುವ ಸುಗಂಧ ದ್ರವ್ಯಗಳು ಕಾಂಟ್ಯಾಕ್ಟ್ ಡರ್ಮಟೈಟಿಸ್ ಎಂಬ ಚರ್ಮರೋಗವನ್ನುಂಟು ಮಾಡುತ್ತವೆ. ಇಂತಹ ಸುಗಂಧ ದ್ರವ್ಯದ ಸಂಪರ್ಕಕ್ಕೆ ಬಂದಾಗ ಚರ್ಮದಲ್ಲಿ ಉರಿಯೂತವುಂಟಾಗುತ್ತದೆ, ಕೆಂಪುಬಣ್ಣಕ್ಕೆ ತಿರುಗುತ್ತದೆ ಮತ್ತು ದದ್ದುಗಳೂ ಕಾಣಿಸಿಕೊಳ್ಳಬಹುದು,ಕಾಂಟ್ಯಾಕ್ಟ್ ಡರ್ಮಟೈಟಿಸ್ ಕಜ್ಜಿಗೂ ಕಾರಣವಾಗಬಹುದು. ಹೆಚ್ಚಿನ ಜನರಿಗೆ ಇಂತಹ ಗಂಭೀರ ಅಡ್ಡಪರಿಣಾಮಗಳು ಉಂಟಾಗುವುದಿಲ್ಲವಾದರೂ ಸುಗಂಧದ್ರವ್ಯಗಳನ್ನು ಬಳಸುವವರು ಅವುಗಳಲ್ಲಿಯ ಜೈವಿಕ ರಾಸಾಯನಿಕಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ಆದರೆ ರಾಸಾಯನಿಕಗಳಿಗೆ ಅಸಹಿಷ್ಣುತೆಯನ್ನು ಹೊಂದಿರುವ ಶೇ.2ರಷ್ಟು ಜನರು ಸುಗಂಧ ದ್ರವ್ಯಗಳಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.

ಒಂದೆಡೆ ಅಲರ್ಜಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೆ ಸುಗಂಧ ಉತ್ಪನ್ನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅನಾಫಿಲಾಕ್ಸಿಸ್ ಅನ್ನು ಒಳಗೊಂಡಿರುವ ಸುಗಂಧ ದ್ರವ್ಯದ ಸಂಪರ್ಕದಿಂದ ಈಗಾಗಲೇ ಇರುವ ಕಜ್ಜಿ ಅಥವಾ ಡರ್ಮಟೈಟಿಸ್ ಉಲ್ಬಣಗೊಳ್ಳುತ್ತದೆ. ಲಭ್ಯ ಅಂಕಿಅಂಶಗಳಂತೆ ಸುಮಾರು ಶೇ.10ರಷ್ಟು ಜನರು ಸುಗಂಧ ದ್ರವ್ಯಗಳಲ್ಲಿರುವ ರಾಸಾಯನಿಕಗಳಿಂದ ಅಲರ್ಜಿಗೊಳಗಾಗುತ್ತಾರೆ. ಆದರೆ ಸುಗಂಧ ದ್ರವ್ಯಗಳ ಹೆಚ್ಚಿರುವ ಬಳಕೆಯಿಂದಾಗಿ ಅದು ಪರಿಮಳದ ಮೋಂಬತ್ತಿಯಾಗಿರಲಿ ಅಥವಾ ಏರ್ ಫ್ರೆಷ್ನರ್ ಆಗಿರಲಿ,ಶೇ.55ರಷ್ಟು ಜನರು ಕನಿಷ್ಠ ಒಂದು ಅಲರ್ಜಿಕಾರಕಕ್ಕೆ ಪಾಸಿಟಿವ್ ಆಗುತ್ತಿರುವುದರಿಂದ ಅಲರ್ಜಿಗಳು ಹೆಚ್ಚಾಗುತ್ತಿವೆ.

ನೂತನ ಅಧ್ಯಯನ ವರದಿಯೊಂದರಂತೆ ಏರ್ ಫ್ರೆಷ್ನರ್‌ಗಳು,ಪರಿಮಳಯುಕ್ತ ಮೋಂಬತ್ತಿಗಳು ಮತ್ತು ಇಂತಹ ಇತರ ವಸ್ತುಗಳು ವ್ಯಕ್ತಿಯನ್ನು ಮೈಗ್ರೇನ್ ಮತ್ತು ಅಸ್ತಮಾಕ್ಕೆ ಗುರಿಯಾಗುವ ಅಪಾಯಕ್ಕೆ ತಳ್ಳುತ್ತವೆ. ಸುಗಂಧ ಉತ್ಪನ್ನಗಳು ವ್ಯಕ್ತಿಯಲ್ಲಿ ಅಲರ್ಜಿಗಳನ್ನು ಉಂಟು ಮಾಡುತ್ತವೆ ಎಂದೂ ವರದಿಯು ಬೆಟ್ಟುಮಾಡಿದೆ. ಪರಿಮಳದ ಕಣಗಳಿಗೆ ಒಡ್ಡಿಕೊಳ್ಳುವ ಸುಮಾರು ಮೂರನೇ ಒಂದು ಭಾಗದಷ್ಟು ಜನರಲ್ಲಿ ಈ ಕಣಗಳು ನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುವುದರಿಂದ ಚರ್ಮದಲ್ಲಿ ಬಿರುಕುಗಳು,ಹಪ್ಪಳೆಗಳು ಮತ್ತು ತುರಿಕೆ ಕಾಣಿಸಿಕೊಳ್ಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News