ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ಧ ಎಫ್‍ಐಆರ್ ದಾಖಲು

Update: 2020-08-26 13:42 GMT

ಬೆಂಗಳೂರು, ಆ.26: ಕೋಲುಮಂಡೆ ಹಾಡಿನ ಮೂಲಕ ಶಿವ ಶರಣೆ ಸಂಕವ್ವ ಅವರನ್ನು ಅಶ್ಲೀಲವಾಗಿ ಚಿತ್ರೀಕರಿಸಿದ್ದಾರೆಂದು ಆರೋಪಿಸಿ ನೀಡಿರುವ ದೂರಿಗೆ ಸಂಬಂಧಿಸಿ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ಧ ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿವಾದದ ಬಳಿಕ ಆನಂದ್ ಆಡಿಯೋ ಸಂಸ್ಥೆ ಯೂಟ್ಯೂಬ್‍ನಿಂದ ಕೋಲುಮಂಡೆ ಹಾಡನ್ನು ಡಿಲೀಟ್ ಮಾಡಿದೆ. ಆದರೂ ಮಲೆಮಾದೇಶ್ವರ ಸ್ವಾಮಿ ಭಕ್ತರು ಶಿವ ಶರಣೆ ಸಂಕವ್ವನಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದಾರೆ.

ದೂರು ಸ್ವೀಕರಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ಎನ್‍ಸಿಆರ್ ನೀಡಿ ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎನ್ನುವ ಬಗ್ಗೆ ಕಾನೂನು ಅಭಿಪ್ರಾಯ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಹಾಡು ವಿವಾದವಾದ ಬಳಿಕ ರ‍್ಯಾಪರ್ ಚಂದನ್ ಶೆಟ್ಟಿ ಭಕ್ತರ ಕ್ಷಮೆಯಾಚಿಸಿದ್ದರು. ಜತೆಗೆ ಯೂಟ್ಯೂಬ್‍ನಿಂದ ಹಾಡನ್ನೂ ಡಿಲೀಟ್ ಮಾಡಲಾಗಿತ್ತು.

ಶಂಕವ್ವನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಂದಿನಿ ಎಂಬವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ತಂಡ ಈ ರೀತಿಯ ಕಾಸ್ಟ್ಯೂಮ್ ಹಾಕಿ ಎಂದು ಸಲಹೆ ನೀಡಿತ್ತು. ಅದರಂತೆ ಕಾಸ್ಟ್ಯೂಮ್ ಹಾಕಿದ್ದೇನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿದಾಗ ಕನ್ನಡಿಗರು ಬೆನ್ನು ತಟ್ಟಿದ್ದಾರೆ. ಕೋಲುಮಂಡೆ ಹಾಡಿನಲ್ಲಿ ಭಕ್ತರ ಮನಸ್ಸಿಗೆ ನೋವಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ನಂದಿನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News