ಬಸವಣ್ಣನವರ ತತ್ವ ಸಿದ್ಧಾಂತವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ: ಸಿಎಂ ಯಡಿಯೂರಪ್ಪ
ಬೆಂಗಳೂರು, ಆ.26: ಬಸವಣ್ಣನವರ ತತ್ವ ಸಿದ್ಧಾಂತವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬುಧವಾರ ನಗರದ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರ ಪ್ರತಿಮೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ನಗರ ಕೇಂದ್ರ ಭಾಗ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವಣ್ಣನವರ ಪ್ರತಿಮೆಯ ಸುತ್ತಲು ಅನುಭವ ಮಂಟಪ ಪರಿಕಲ್ಪನೆಯಡಿ ಮರುವಿನ್ಯಾಸಗೊಳಿಸಲಾಗಿದೆ ಎಂದರು.
ಬಸವಣ್ಣನವರು ಅನುಭಾವಿ, ಭಕ್ತಿ ಭಂಡಾರಿ, ಸಮಾಜ ಸುಧಾರಕ, ದ್ರಷ್ಟಾರ, ವಿಚಾರವಾದಿ, ಸಮಾಜವಾದಿ, ಅಹಿಂಸಾವಾದಿ, ದಲತೋದ್ಧಾರಕ ಮತ್ತು ಸ್ತ್ರೀ ಕುಲೋದ್ಧಾರಕರಾಗಿದ್ದರು. ಬಸವಣ್ಣನವರು ಶ್ರಮ ಜೀವನದ ಘನತೆಯನ್ನು ಎತ್ತಿ ಹಿಡಿದು ಕಾಯಕವೇ ಕೈಲಾಸವೆಂದು ಸಾರಿದ ಮಹಾಚೇತನ ಎಂದು ಹೇಳಿದರು.
ಕನ್ನಡ ಸಾಹಿತ್ಯದಲ್ಲಿ ನೂತನ ಮಾರ್ಗವನ್ನು ನಿರ್ಮಿಸಿದ ಬಸವಣ್ಣನವರು, ಅಸ್ಪೃಶ್ಯತೆ, ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡಲು ತಮ್ಮ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳ ಮೇಲೆ ವರ್ಣ-ವರ್ಗರಹಿತ ಸಮಾಜವನ್ನು ರೂಪಿಸಲು ಮತ್ತು ಧರ್ಮ ಹಾಗೂ ಸಮಾಜದಲ್ಲಿ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ಪ್ರಯತ್ನಿಸಿದವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ವಿ.ಸೋಮಣ್ಣ, ಡಾ. ಕೆ.ಸುಧಾಕರ್, ಶಾಸಕರಾದ ರಿಜ್ವಾನ್ ಹರ್ಷದ್, ಉದಯ್ ಬಿ. ಗರುಡಾಚಾರ್, ಎಸ್.ಆರ್.ವಿಶ್ವನಾಥ್ ಉಪಸ್ಥಿತರಿದ್ದರು.
ಆಸ್ಪತ್ರೆ-ಕ್ರೀಡಾಂಗಣ ಉದ್ಘಾಟನೆ
ಪಾಲಿಕೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಮಹಾವಿದ್ಯಾಲಯ ಮತ್ತು ವೈದ್ಯಕೀಯ ಸಂಸ್ಥೆ ಹಾಗೂ ಇನ್ಫೋಸಿಸ್ ಫೌಂಡೇಷನ್ ಸಂಸ್ಥೆಯ ಸಹಯೋಗದೊಂದಿಗೆ ಜಯಮಹಲ್ ವಾರ್ಡ್ ನಲ್ಲಿ ನೂತನವಾಗಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಬಿಬಿಎಂಪಿ ಆಸ್ಪತ್ರೆ ಕಟ್ಟಡ ಹಾಗೂ ವಿಶ್ವೇಶ್ವರ ಪುರಂ ವಾರ್ಡ್‍ನಲ್ಲಿ ನೂತನವಾಗಿ ನಿರ್ಮಿಸಿರುವ ಬಿಬಿಎಂಪಿ ಒಳಾಂಗಣ ಕ್ರೀಡಾಂಗಣವನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು.