ನೆರೆ ಸಂತ್ರಸ್ತರಿಗೆ ನೀಡಿದ ನೆರವಿನ ಬಗ್ಗೆ ಸರಕಾರ ಶ್ವೇತಪತ್ರ ಹೊರಡಿಸಲಿ: ಈಶ್ವರ್ ಖಂಡ್ರೆ
ಬೆಂಗಳೂರು, ಆ.26: ರಾಜ್ಯದ 56 ತಾಲೂಕು, 1000ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರೆ ಬಿಸಿ ತಟ್ಟಿದೆ. 3000 ಮನೆ ಕುಸಿತ, 80 ಸಾವಿರ ಹೆಕ್ಟೇರ್ ಬೆಲೆ ನಾಶವಾಗಿದೆ. 3500 ಕಿಲೋ ಮೀಟರ್ ರಸ್ತೆ ಹಾಳಾಗಿದೆ. 365 ಕಟ್ಟಡ 250 ಸೇತುವೆ ಪ್ರವಾಹದಿಂದ ಕುಸಿದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಹೋದ ವರ್ಷ ಬಂದ ನೆರೆಗೂ ಜನ ತತ್ತರಿಸಿ ಹೋಗಿದ್ದರು. ಆ ಸಂದರ್ಭದಲ್ಲಿಯೂ ಜನರ ರಕ್ಷಣೆಗೆ ಧಾವಿಸುವಲ್ಲಿ ರಾಜ್ಯ ಬಿಜೆಪಿ ಸರಕಾರ ವಿಫಲವಾಯಿತು ಎಂದು ದೂರಿದರು.
ಕೇಂದ್ರದ ನರೇಂದ್ರ ಮೋದಿ ಸರಕಾರವು ಜನರ ರಕ್ಷಣೆಗೆ ಬರಲಿಲ್ಲ. ಚುನಾವಣೆ ಸಮಯದಲ್ಲಿ ನಮ್ಮದು ಡಬಲ್ ಎಂಜಿನ್ ಸರಕಾರ ಅಂತ ಹೇಳಿದ್ರು. ಆದರೆ, ಕೇಂದ್ರ ಸರಕಾರ ಜನರ ಸಂಕಷ್ಟಗಳಿಗೆ ಮಾತ್ರ ಸ್ಪಂದಿಸುತ್ತಿಲ್ಲ. ಕಳೆದ ಬಾರಿ ಸೌಜನ್ಯಕ್ಕೂ ರಾಜ್ಯದ ನೆರೆ ಅಧ್ಯಯನಕ್ಕೆ ಪ್ರಧಾನಿ ಮೋದಿ ಬರಲಿಲ್ಲ ಎಂದು ಈಶ್ವರ್ ಖಂಡ್ರೆ ಕಿಡಿಗಾರಿದರು.
ಕಳೆದ ವರ್ಷ ರಾಜ್ಯ ಸರಕಾರ ನೆರೆ ಸಂತ್ರಸ್ತರಿಗೆ ಎಷ್ಟು ಮನೆ ಕಟ್ಟಿ ಕೊಟ್ಟಿದೆ? ಯಾವ ರೀತಿ ಅವರಿಗೆ ಸಹಾಯ ಆಗಿದೆ ಅನ್ನೋದರ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಪ್ರವಾಹದಿಂದ 10 ಸಾವಿರ ಕೋಟಿ ರೂ.ನಷ್ಟವಾಗಿದೆ. ಆದರೆ 450 ಕೋಟಿ ರೂ.ಮಾತ್ರ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಪ್ರಧಾನಿಗೆ ಇವರು ಹೆದರುತ್ತಿದ್ದಾರೆ. 25 ಬಿಜೆಪಿ ಸಂಸದರು ರಾಜ್ಯದಿಂದ ಗೆದ್ದಿದ್ದಾರೆ. ಇಲ್ಲಿಯವರೆಗೆ ಪ್ರಧಾನಿ ಮೇಲೆ ಒತ್ತಡ ತರುವ ಕೆಲಸ ಮಾಡಿಲ್ಲ. ಅಂಜುಬುರುಕ ಸಂಸದರನ್ನ ರಾಜ್ಯದ ಜನ ಆರಿಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರು ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ನೆರವು ಘೋಷಣೆ ಮಾಡಿಲ್ಲ. 14 ಸಾವಿರ ಮಂದಿಗೆ ಪರಿಹಾರವೇ ಸಿಕ್ಕಿಲ್ಲ. ರಾಜ್ಯ ಸರಕಾರದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ. ಕೂಡಲೆ ಸರಕಾರ ಕೇಂದ್ರಕ್ಕೆ ನಿಯೋಗ ಕರೆದೊಯ್ಯಬೇಕು ಅನ್ನುವುದು ನನ್ನ ಆಗ್ರಹ ಎಂದು ಈಶ್ವರ್ ಖಂಡ್ರೆ ಹೇಳಿದರು.
ಕೇಂದ್ರ ಸರಕಾರ ತಕ್ಷಣಕ್ಕೆ ರಾಜ್ಯಕ್ಕೆ 5000 ಕೋಟಿ ರೂ.ಪರಿಹಾರ ಬಿಡುಗಡೆ ಮಾಡಲಿ. ಕೇಂದ್ರದ ವಿತ್ತ ಸಚಿವರು ನಮ್ಮ ರಾಜ್ಯದ ಪ್ರತಿನಿಧಿ. ಇವರು ರಾಜ್ಯಕ್ಕೆ ಯಾವುದೇ ನೆರವು ಘೋಷಿಸುತ್ತಿಲ್ಲ. ಕೇಂದ್ರ ಸರಕಾರ ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠೀಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.