ಬೆಂಗಳೂರು ಪೊಲೀಸರ ಕಾರ್ಯಾಚರಣೆ: 1 ಕೋಟಿ ರೂ. ಮೌಲ್ಯದ 204 ಕೆಜಿ ಗಾಂಜಾ ಜಪ್ತಿ

Update: 2020-08-27 12:31 GMT

ಬೆಂಗಳೂರು, ಆ.27: ಬೆಂಗಳೂರು ಪೊಲೀಸರು ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಸುಮಾರು 1 ಕೋಟಿ ರೂ. ಮೌಲ್ಯದ 204 ಕೆಜಿ ಮಾದಕ ವಸ್ತು ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಿಂದ ಗಾಂಜಾವನ್ನು ತಂದು ಅಂತರ್ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಮೈಸೂರಿನ ಕೆ.ಆರ್.ಪುರದ ಸಮೀರ್(37), ಕೈಸರ್ ಪಾಷಾ(41) ಹಾಗೂ ಚಿಕ್ಕಬಳ್ಳಾಪುರದ ಇಸ್ಮಾಯಿಲ್ ಶರೀಫ್(38) ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿ ಸಮೀರ್ ಚಾಲಕನಾಗಿದ್ದಾನೆ. ಪೂರ್ವ ಗೋದಾವರಿ ಜಿಲ್ಲೆಯಿಂದ ಕಂಟೈನರ್ ಲಾರಿಯಲ್ಲಿ ಗಾಂಜಾ ಸಾಗಣೆ ಮಾಡುವ ಜವಾಬ್ದಾರಿಯನ್ನು ಆತನೇ ವಹಿಸಿಕೊಂಡಿದ್ದ. ಸಹಚರರಾದ ಕೈಸರ್ ಪಾಷಾ ಹಾಗೂ ಇಸ್ಮಾಯಿಲ್ ಮೂಲಕ ಮಧ್ಯವರ್ತಿಗಳಿಗೆ ಗಾಂಜಾ ಮಾರಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.

ಕೃತ್ಯಕ್ಕೆ ಬಳಸುತ್ತಿದ್ದ 3 ಮೊಬೈಲ್ ಫೋನ್, ಲಾರಿ, ಕಾರು ವಶಪಡಿಸಿಕೊಂಡಿದ್ದು, ಬಂಧಿತರಲ್ಲಿ ಓರ್ವ ವ್ಯಕ್ತಿ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ನಂತರ ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News