ಡಿವೈಡರ್ ಹಾರಿ ಗ್ಯಾಸ್ ಲ್ಯಾರಿಗೆ ಕಾರು ಢಿಕ್ಕಿ: ಇಬ್ಬರು ಮೃತ್ಯು

Update: 2020-08-27 11:50 GMT

ಬೆಂಗಳೂರು, ಆ.27: ಕಾರೊಂದು ನಿಯಂತ್ರಣ ತಪ್ಪಿ ಪಕ್ಕದ ರಸ್ತೆಗೆ ನುಗ್ಗಿ ಗ್ಯಾಸ್ ಲ್ಯಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮೃತಪಟ್ಟವರನ್ನು ನಗರದ ಚೇತನ್ ಮತ್ತು ನವೀನ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಚಂದು ಮತ್ತು ಆದಿ ಎಂಬುವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಚೇತನ್, ನವೀನ್, ಚಂದು ಮತ್ತು ಆದಿ ಸೇರಿಕೊಂಡು ಕಾರಿನಲ್ಲಿ ಕುಣಿಗಲ್ ಮಾರ್ಗದ ಕಡೆಗೆ ಹೋಗುತ್ತಿದ್ದರು. ಇಲ್ಲಿನ ಬೆಂಗಳೂರು-ಕುಣಿಗಲ್ ಬೈಪಾಸ್ ರಸ್ತೆಯ ಬಿಪಿ ಇಂಡಿಯನ್ ಶಾಲೆ ಮುಂಭಾಗ ಕಾರು ನಿಯಂತ್ರಣ ತಪ್ಪಿ ಏಕಾಏಕಿ ಡಿವೈಡರ್ ಹಾರಿ ಪಕ್ಕದ ರಸ್ತೆಗೆ ನುಗ್ಗಿದ್ದು, ಈ ಮಾರ್ಗದಲ್ಲಿ ಬರುತ್ತಿದ್ದ ಗ್ಯಾಸ್ ಲಾರಿಗೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಚೇತನ್ ಮತ್ತು ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು, ಕಾರಿನಲ್ಲಿ ಸಿಕ್ಕಿಕೊಂಡಿದ್ದ ಗಾಯಾಳುಗಳನ್ನು ತಕ್ಷಣ ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News