ಮಹಿಳೆ ಆತ್ಮಹತ್ಯೆ ಪ್ರಕರಣ: ನಿವೃತ್ತ ಎಸಿಪಿ ಸೇರಿ ಮೂವರ ಬಂಧನ
Update: 2020-08-27 17:36 IST
ಬೆಂಗಳೂರು, ಆ.27: ವರದಕ್ಷಿಣೆ ಕಿರುಕುಳ ಹಿನ್ನೆಲೆ ಸೊಸೆ ಆತ್ಮಹತ್ಯೆ ಪ್ರಕರಣ ಸಂಬಂಧ ನಿವೃತ್ತ ಎಸಿಪಿ ಸೇರಿದಂತೆ ಮೂವರು ಆರೋಪಿಗಳನ್ನು ಇಲ್ಲಿನ ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಿವೃತ್ತ ಎಸಿಪಿ ಅಂಕೆಗೌಡ, ಪತ್ನಿ ಅನಸೂಯಾ ಹಾಗೂ ಮಗ ಸರ್ವೇಶ್‍ರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿವೃತ್ತ ಎಸಿಪಿ ಅಂಕೆಗೌಡ ಮಗ ಸರ್ವೇಶ್‍ನೊಂದಿಗೆ ಶೃತಿ(30) ಎಂಬಾಕೆ 2019ನೇ ಸಾಲಿನಲ್ಲಿ ವಿವಾಹವಾಗಿದ್ದರು. ಮದುವೆ ಬಳಿಕ ಸರ್ವೇಶ್‍ಗೆ ಇದು ಎರಡನೇ ಮದುವೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಒಂದು ಮಗುವಾದ ಬಳಿಕ ಗಂಡು ಮಗು ಬೇಕೆಂದು ಆಕೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ಆ.17ರಂದು ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಬಗ್ಗೆ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಶೃತಿ ಸಂಬಂಧಿಕರು ನೀಡಿದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ, ಮೂವರನ್ನು ಬಂಧಿಸಿದ್ದಾರೆ.