ಬೆಂಗಳೂರು: ಮೇಲ್ಸೇತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ

Update: 2020-08-27 12:39 GMT

ಬೆಂಗಳೂರು, ಆ.27: ಶೀಘ್ರದಲ್ಲಿಯೇ ನಮ್ಮ ಮೆಟ್ರೋ ಸೇವೆಯನ್ನು ಪುನರ್ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಗುರುವಾರ ಆನಂದ್ ರಾವ್ ವೃತ್ತದಲ್ಲಿರುವ ಮೇಲ್ಸೆತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಎಂದು ನಾಮಕರಣಗೊಳಿಸಿ ಮಾತನಾಡಿದ ಅವರು, ಕೊರೋನ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಮೆಟ್ರೊ ಸೇವೆ ಪುನರ್ ಆರಂಭಿಸಲಾಗುವುದು ಎಂದು ಹೇಳಿದರು.

ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಉಸಿರಿರುವ ತನಕ ಹೋರಾಡಿದ ಸಂಗೊಳ್ಳಿ ರಾಯಣ್ಣ ಅವರು ಯುವ ಜನರಿಗೆ ಸ್ಪೂರ್ತಿದಾಯಕ ವ್ಯಕ್ತಿ. ಮೇಲ್ಸೇತುವೆಗೆ ರಾಯಣ್ಣ ಹೆಸರಿಟ್ಟಿದ್ದು ಔಚಿತ್ಯವೆನಿಸಿದೆ ಎಂದು ಹೇಳಿದರು.

ಬೆಂಗಳೂರಿನ ಮೂಲಭೂತ ಸೌಕರ್ಯಗಳ ಸುಧಾರಣೆ ನಮ್ಮ ಗುರಿ. ನಗರದಲ್ಲಿ ವಾಹನ ದಟ್ಟಣೆ ನಿವಾರಿಸಲು ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಸಹಾಯಕಾರಿಯಾಗುತ್ತದೆ ಎಂದು ಹೇಳಿದರು.

ಈ ವೇಳೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಸಚಿವರಾದ ಭೈರತಿ ಬಸವರಾಜು, ಕೆ.ಎಸ್ ಈಶ್ವರಪ್ಪ, ಶಾಸಕ ದಿನೇಶ್ ಗುಂಡೂರಾವ್, ಮೇಯರ್ ಗೌತಮ್ ಕುಮಾರ್, ಉಪಮೇಯರ್ ರಾಮಮೋಹನ ರಾಜು, ಪಾಲಿಕೆ ವಿಪಕ್ಷ ನಾಯಕ ಅಬ್ದುಲ್ ವಾಜೀದ್ ಉಪಸ್ಥಿತರಿದ್ದರು.

ಸಮಸ್ಯೆ ಬಗೆಹರಿಸಲು ಸೂಚನೆ

ಬೆಳಗಾವಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸಂಬಂಧಪಟ್ಟಂತೆ ಬುಧವಾರ ಸ್ವಾಮೀಜಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News