ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ ಪ್ರಕರಣ: 20 ಲಕ್ಷ ರೂ. ನಗದು ಜಪ್ತಿ ಮಾಡಿದ ಎಸಿಬಿ

Update: 2020-08-27 17:13 GMT

ಬೆಂಗಳೂರು, ಆ.27: ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 'ಜಮೀನು ಖರೀದಿ' ಯೋಜನೆ ಅವ್ಯವಹಾರ ಆರೋಪ ಸಂಬಂಧ ಮಧ್ಯವರ್ತಿಗಳ ಮೂಲಕ ಅಧಿಕಾರಿಗಳು ಹಣ ಹಂಚಿಕೊಳ್ಳುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನಡೆಸಿ, 20 ಲಕ್ಷಕ್ಕೂ ಅಧಿಕ ಮೊತ್ತದ ನಗದು ಜಪ್ತಿ ಮಾಡಿದೆ.

ಸಂಜೆ ವೇಳೆಗೆ ಹಣ ಬರುವ ಖಚಿತ ಮಾಹಿತಿ ಆಧರಿಸಿ ಇಲ್ಲಿನ ವಸಂತನಗರದಲ್ಲಿರುವ ನಿಗಮದ ಕಚೇರಿಗೆ ಎಸ್ಪಿ ಕಲಾ ಕೃಷ್ಣಸ್ವಾಮಿ, ಡಿಎಸ್ಪಿಗಳಾದ ಬಾಲಕೃಷ್ಣ ಹಾಗೂ ರವಿ ಅವರನ್ನೊಳಗೊಂಡ ಅಧಿಕಾರಿಗಳ ತಂಡ ದಾಳಿ ನಡೆಸಿತು.

ಈ ಪ್ರಕರಣ ಸಂಬಂಧ ಮಂಡಳಿಯ ಪ್ರಧಾನ ವ್ಯವಸ್ಥಾಪಕ ನಾಗೇಶ, ವ್ಯವಸ್ಥಾಪಕ ಸುಬ್ಬಯ್ಯ, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಮಂಜುಳಾ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ಆರೋಪಿತ ಅಧಿಕಾರಿಗಳನ್ನು ಬಂಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಆರೋಪ?: ಸರಕಾರದಡಿ ಫಲವತ್ತಾದ, ಕೃಷಿಗೆ ಯೋಗ್ಯವಾಗಿರುವ ಭೂಮಿ ಖರೀದಿಸಿದ ಬಳಿಕ ಅದನ್ನು ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಪಂಗಡದ ಭೂರಹಿತ ಫಲಾನುಭವಿಗಳಿಗೆ ಮಂಜೂರು ಮಾಡುವ ಯೋಜನೆ ಇದಾಗಿದೆ. ಆದರೆ, ಕೆಲ ಅಧಿಕಾರಿಗಳು, ಕಳಪೆಯಾಗಿರುವ ಭೂಮಿಯನ್ನು ಮಧ್ಯವರ್ತಿಗಳ ಮೂಲಕ ಕೃಷಿಕರಿಂದ ಖರೀದಿಸುತ್ತಾರೆ. ನಿಗದಿಯಂತೆ ಹೆಚ್ಚಿನ ಮೊತ್ತವನ್ನು ಮಧ್ಯವರ್ತಿಗಳಿಗೆ ಮಂಜೂರು ಮಾಡಿಸುತ್ತಾರೆ. ಬಳಿಕ, ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ಸೇರಿ ಹೆಚ್ಚುವರಿ ಹಣವನ್ನು ಹಂಚಿಕೆ ಮಾಡಿಕೊಳ್ಳುತ್ತಾರೆ ಎನ್ನುವ ಆರೋಪಗಳು ಕೇಳಿಬಂದಿದೆ.

ಪ್ರಕರಣ ಸಂಬಂಧ ಎಸಿಬಿ ತನಿಖಾಧಿಕಾರಿಗಳು, ದಾಖಲಾತಿ ಪರಿಶೀಲನೆ ಹಾಗೂ ರಾಜ್ಯದ ವಿವಿಧೆಡೆ ಈ ರೀತಿಯ ಅಕ್ರಮ ನಡೆಯುತ್ತಿರುವ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News