ಸೆ.1ರಿಂದ ಪದವಿ ಕಾಲೇಜು ಪ್ರಾರಂಭ ಬೇಡ: ಎಐಡಿಎಸ್‍ಒ ಒತ್ತಾಯ

Update: 2020-08-27 14:26 GMT

ಬೆಂಗಳೂರು, ಆ.27: ರಾಜ್ಯ ಸರಕಾರ ಪದವಿ ಕಾಲೇಜುಗಳನ್ನು ಸೆ.1ರಿಂದ ಆನ್‍ಲೈನ್ ಹಾಗೂ ಅ.1ರಿಂದ ಆಫ್‍ಲೈನ್ ಮೂಲಕ ತರಗತಿ ನಡೆಸಲು ಮುಂದಾಗಿರುವ ಕ್ರಮ ಏಕಪಕ್ಷೀಯವಾಗಿದೆ. ಕೂಡಲೇ ಈ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಜೇಷನ್(ಎಐಡಿಎಸ್‍ಒ) ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆ, ರಾಜ್ಯದ ಕೆಲವೆಡೆ ಆನ್‍ಲೈನ್ ಮೂಲಕ ತರಗತಿಗಳಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲವೆಂದು ಮನನೊಂದು ಬಡ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ನಮ್ಮ ಕಣ್ಮುಂದೆ ಇದೆ. ಹಾಗೂ ಗ್ರಾಮೀಣ ಭಾಗದಲ್ಲಿ ಸಮರ್ಪಕ ವಿದ್ಯುತ್ ಹಾಗೂ ನೆಟ್‍ವರ್ಕ್ ಇರುವುದಿಲ್ಲ. ಇಂತಹ ಸಮಯದಲ್ಲಿ ಆನ್‍ಲೈನ್ ತರಗತಿ ನಡೆಸುವುದು ಸೂಕ್ತವಲ್ಲ ಎಂಬುದು ಶಿಕ್ಷಣ ತಜ್ಞರು ಹಾಗೂ ಪೋಷಕರ ಅಭಿಪ್ರಾಯವಾಗಿದೆ.

ಕಳೆದ ಕೆಲವು ದಿನಗಳಿಂದ ಕೊರೋನ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತಿದೆ. ಸರಿಯಾದ ಪೂರ್ವಸಿದ್ಧತೆಯಿಲ್ಲದ ಕಾರಣ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್‍ಗಳ ಕೊರತೆವುಂಟಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಪ್ರಾಣಕ್ಕೆ ಅಪಾಯ ತಂದೊಡ್ಡುವಂತಹ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳಬಾರದು. ಕೂಡಲೇ ಸೆಪ್ಟಂಬರ್ ನಲ್ಲಿ ಆನ್‍ಲೈನ್ ಹಾಗೂ ಅಕ್ಟೋಬರ್ ನಿಂದ ಆಫ್‍ಲೈನ್ ತರಗತಿ ನಡೆಸುವ ತನ್ನ ನಿರ್ಧಾರವನ್ನು ರಾಜ್ಯ ಸರಕಾರ ಕೈ ಬಿಡಬೇಕು. ಮುಂದಿನ ಕ್ರಮಗಳನ್ನು ವಿದ್ಯಾರ್ಥಿ ಸಂಘಟನೆ, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಹಾಗೂ ಪೋಷಕರ ಜತೆಗೂಡಿ, ಪರಾಮರ್ಶಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕೆಂದು ಎಐಡಿಎಸ್‍ಒನ ರಾಜ್ಯಾಧ್ಯಕ್ಷೆ ಅಶ್ವಿನಿ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News