ಮರೆಯಲಾಗದ ದಲಿತ ನಾಯಕ: ಅಯ್ಯನ್ ಕಾಳಿ

Update: 2020-08-27 19:30 GMT

ಅಂಬೇಡ್ಕರ್ ಅವರಿಗಿಂತಲೂ ಮೂರು ದಶಕಗಳ ಪೂರ್ವದಲ್ಲಿಯೇ ಕೇರಳದಲ್ಲಿ ಅಯ್ಯನ್ ಕಾಳಿ ಎಂಬವರು ನಿಮ್ನ ವರ್ಗದ ಶಿಕ್ಷಣ, ಸಮಾನತೆ ಮತ್ತು ಅಭಿವೃದ್ಧಿಗಾಗಿ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಿದ್ದರು ಎಂಬುದು ನಿಜಕ್ಕೂ ರೋಚಕವಾದದ್ದು.


ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾಕಾರ ಹಾಗೂ ಮಹಾನ್ ಮಾನವತಾವಾದಿ. ಹೋರಾಟ ಮತ್ತು ಚಿಂತನೆಗಳ ಮೂಲಕ ದೇಶದ ನಾಯಕರಾಗಿದ್ದಲ್ಲದೆ ಜಗತ್ತಿನ ಗಮನ ಸೆಳೆದವರು. ಆದರೆ ಅಂಬೇಡ್ಕರ್ ಅವರಿಗಿಂತಲೂ ಮೂರು ದಶಕಗಳ ಪೂರ್ವದಲ್ಲಿಯೇ ಕೇರಳದಲ್ಲಿ ಅಯ್ಯನ್ ಕಾಳಿ ಎಂಬವರು ನಿಮ್ನ ವರ್ಗದ ಶಿಕ್ಷಣ, ಸಮಾನತೆ ಮತ್ತು ಅಭಿವೃದ್ಧಿಗಾಗಿ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಿದ್ದರು ಎಂಬುದು ನಿಜಕ್ಕೂ ರೋಚಕವಾದದ್ದು.

ಅಯ್ಯನ್ ಕಾಳಿ 28 ಆಗಸ್ಟ್ 1863ರಂದು ಕೇರಳದ ತಿರುವನಂತಪುರದಿಂದ 15 ಕಿ.ಮೀ. ದೂರದಲ್ಲಿರುವ ವೆಂಗನೂರಿನಲ್ಲಿ ಹೊಲೆಯ (ಅಸ್ಪಶ್ಯ)ಜನಾಂಗದ ವ್ಯಕ್ತಿಯಾಗಿ ಜನಿಸಿದವರು. ತೀರಾ ಬಡತನದಲ್ಲಿದ್ದ ಇವರ ತಂದೆ ಪ್ರಬಲ ಭೂ ಮಾಲಕ ನಾಯರ್ ಜನಾಂಗದ ಪರಮೇಶ್ವರನ್ ಪಿಳ್ಳೆ ಎಂಬವರ ಬಳಿ ಜೀತ ಮಾಡುತ್ತಿದ್ದರು. ಪರಮೇಶ್ವರನ್ ಪಿಳ್ಳೆ ಮಾನವೀಯ ಮನುಷ್ಯನಾಗಿದ್ದ ಕಾರಣ ಅಯ್ಯನ್ ಕಾಳಿಯವರ ಸಜ್ಜನಿಕೆ ಮತ್ತು ಪ್ರಾಮಾಣಿಕತೆಯನ್ನು ಕಂಡು ಎಂಟು ಎಕರೆ ಕಾಡು ಪ್ರದೇಶವನ್ನು ಕಡಿದು ಸಾಗುವಳಿ ಜಮೀನಾಗಿ ಮಾಡಿ ಅದನ್ನು ಅಯ್ಯನ್ ಕಾಳಿ ಕುಟುಂಬಕ್ಕೆ ನೀಡಿದರು. ದಲಿತರಿಗೆ ಜಮೀನುಕೊಟ್ಟ ಪರಮೇಶ್ವರನ್ ಅವರ ವಿರುದ್ಧ ನಾಯರ್ ಸಮುದಾಯ ತಕರಾರು ತೆಗೆದು ಗಲಾಟೆ ಮಾಡಿತು. ಇದಕ್ಕೆಲ್ಲಾ ಅಂಜದೆ ಅಯ್ಯನ್ ಕಾಳಿ ಕುಟುಂಬಕ್ಕೆ ಜಮೀನನ್ನು ಹಸ್ತಾಂತರಿಸಿದರು. ಭೂಮಿಯನ್ನು ಸ್ವಂತಕ್ಕೆ ಕನಸಲ್ಲೂ ಊಹಿಸಲಾಗದ ಕಾಲದಲ್ಲಿ ಭೂಮಾಲಕತ್ವ ಸಿಕ್ಕಿದ್ದು ಕೂಡ ಒಂದು ಚಾರಿತ್ರಿಕ ದಾಖಲೆ.

ಕೇರಳದಲ್ಲಿ ಅದೊಂದು ಘನಘೋರ ಕಾಲ. ಅಯ್ಯನ್ ಕಾಳಿಗೆ ಆಗಿನ್ನೂ ಐದು ವರ್ಷ. ಓದ ಬೇಕೆನ್ನುವ ತುಡಿತ. ಆದರೆ ಅಲ್ಲಿ ದಲಿತರು ಯಾರೂ ವಿದ್ಯೆಕಲಿಯುವಂತಿಲ್ಲ. ಇದೊಂದು ಸವರ್ಣೀಯರ ಕಟ್ಟಪ್ಪಣೆ. ದಲಿತರಿಗೆ ಮೇಲ್ಜಾತಿ ಮನೆಗಳಲ್ಲಿ ಜೀತ ಮಾಡುವುದನ್ನು ಬಿಟ್ಟು ಮತ್ಯಾವ ಉದ್ಯೋಗವನ್ನಾಗಲಿ, ಶಿಕ್ಷಣವನ್ನಾಗಲಿ ಊಹಿಸುವ ಸ್ವಾತಂತ್ರ್ಯವೂ ಇರಲಿಲ್ಲ. ದಲಿತರು ಅಲ್ಲಿ ಮಾರಾಟದ ವಸ್ತುವಾಗಿದ್ದರು. ಅಮೆರಿಕದವರು ಕಪ್ಪುಜನರನ್ನು ಮಾರುಕಟ್ಟೆಯಲ್ಲಿಕೊಂಡು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಂತಹ ಸ್ಥಿತಿ ಅಲ್ಲಿತ್ತು. ಕೇರಳದ ಕೊಟ್ಟಾಯಂ, ಅಂಬಾಲಪಝ, ಕಾಯಮ್ ಕುಲಮ್ ಮುಂತಾದ ಸ್ಥಳಗಳಲ್ಲಿ ದಲಿತರನ್ನು ತಂದು ಮಾರಾಟ ಮಾಡುತ್ತಿದ್ದರು. ಇಲ್ಲಿ ಪ್ರಬಲ ಭೂಮಾಲಕರು ಬಂದು ಜೀತಕ್ಕಾಗಿ ಕೊಂಡುಕೊಳ್ಳುತ್ತಿದ್ದರು. ಈ ಮುಕ್ತ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಯೂರೋಪ್‌ನ ಹಲವು ದೇಶಗಳ ಮಂದಿ ಬಂದು ದಲಿತರನ್ನು ಕೊಂಡುಕೊಳ್ಳುವ ಪದ್ಧತಿ ಇತ್ತು. ಇಂತಹ ಕೆಟ್ಟ ಸಂದರ್ಭದಲ್ಲಿ ಅಯ್ಯನ್ ಕಾಳಿಯ ಶಿಕ್ಷಣ ಕನಸಿನ ಮಾತಾಗಿತ್ತು.

ಅಯ್ಯನ್ ಕಾಳಿಯವರು ಜಾತಿಕಾರಣಕ್ಕೆ ಶಿಕ್ಷಣ ಕಳೆದುಕೊಂಡಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಸಾರ್ವಜನಿಕ ತಾರತಮ್ಯ, ಇತರರೊಡನೆ ಆಟ ಅಡುವಂತಿಲ್ಲ, ಸೇರುವಂತಿಲ್ಲ. ಒಂದು ವೇಳೆ ಸೇರಿದರೆ ಅದಕ್ಕೆ ದಂಡ ವಿಧಿಸುವ ಸವರ್ಣೀಯ ಮನಸ್ಸು...ಇವೆಲ್ಲವೂ ಅಯ್ಯನ್ ಕಾಳಿ ಮನಸಿನಲ್ಲಿ ಆಳವಾಗಿ ಹೆಪ್ಪುಗಟ್ಟಿದ್ದವು. ಇಂತಹ ಸಮಸ್ಯೆಗಳೇ ಅವರನ್ನು ಹೋರಾಟಕ್ಕೆ ಪ್ರೇರೇಪಿಸಿತು. ಅಯ್ಯನ್ ಕಾಳಿಯವರ ಮೊತ್ತ ಮೊದಲ ಹೋರಾಟ ‘ವಿಲ್ಲುವಂಡಿಯಾತ್ರ’ (ಎತ್ತಿನಗಾಡಿ ಪ್ರಯಾಣ). ಸವರ್ಣೀಯ ಮನಸ್ಸುಗಳು ದಲಿತರು ಕೆಲ ರಸ್ತೆಗಳಲ್ಲಿ ಓಡಾಡಬಾರದೆಂದು ನಿಷೇಧ ಮಾಡಿದ್ದರು. 1893ರಲ್ಲಿ ಎತ್ತಿನ ಗಾಡಿಗಳನ್ನು ಕಟ್ಟಿಕೊಂಡು ರಸ್ತೆಯಲ್ಲೆಲ್ಲಾ ದಲಿತರು ಸಂಚರಿಸುವ ಮೂಲಕ ದೊಡ್ಡ ಆಂದೋಲನವನ್ನೇ ಸೃಷ್ಟಿ ಮಾಡಿದರು. ಇದರಿಂದ ಸವರ್ಣೀಯರು ಮತ್ತು ದಲಿತರೊಡನೆ ಹಿಂಸಾತ್ಮಕ ಕೃತ್ಯವೂ ನಡೆಯಿತು. ಆದರೂ ಅಯ್ಯನ್ ಕಾಳಿ ಗಟ್ಟಿಯಾಗಿ ನಿಂತು ಸವರ್ಣೀಯರನ್ನು ಎದುರಿಸಿ ರಸ್ತೆಯನ್ನು ಎಲ್ಲರೂ ಓಡಾಡಲು ಮುಕ್ತಗೊಳಿಸಿದರು. ಈ ಚಳವಳಿಯ ನಂತರ ಅಯ್ಯನ್ ಕಾಳಿ ಕೇರಳದಲ್ಲಿ ದಲಿತ ನಾಯಕನಾಗಿ ಹೊರಹೊಮ್ಮಿದರು.

ವಿಲ್ಲುವಂಡಿ ಯಾತ್ರೆಯ ನಂತರ ನಡೆದಿದ್ದು ಚಾಲಿಯಾರ್‌ದೊಂಬಿ. ಮಲಬಾರ್‌ನಲ್ಲಿ ದಲಿತ ಹೆಣ್ಣು ಮಕ್ಕಳು ಎದೆಯ ಭಾಗ ಬಟ್ಟೆ ಧರಿಸುವಂತಿರಲಿಲ್ಲ. ಆದರೆ 1788ರಲ್ಲಿ ಟಿಪ್ಪುಸುಲ್ತಾನ್ ಮಹಿಳೆಯರು ಎದೆಭಾಗ ಮುಚ್ಚಬೇಕು ಎಂದು ರಾಜಾಜ್ಞೆ ಹೊರಡಿಸಿದರು. ಆದರೆ ಟ್ರಾವಂಕೂರಿನ ರಾಣಿ ಗೌರಿಪಾರ್ವತಿ ಇದಕ್ಕೆ ವಿರುದ್ಧವಾಗಿದ್ದಳು. ಅಲ್ಲಿ ದಲಿತ ಮಹಿಳೆಯರಷ್ಟೇ ಅಲ್ಲದೆ ಬ್ರಾಹ್ಮಣ, ಬಿಲ್ಲವ ಹೀಗೆ ಸವರ್ಣೀಯ ಹೆಣ್ಣು ಮಕ್ಕಳು ಕೂಡ ಎದೆಯ ಭಾಗವನ್ನು ಮುಚ್ಚುವಂತಿರಲಿಲ್ಲ. ಆ ಸಂದರ್ಭದಲ್ಲಿ ಬಿಲ್ಲವ ಜಾತಿಗೆ ಸೇರಿದ ಹೆಣ್ಣು ಮಗಳೊಬ್ಬಳು ಯೂರೋಪ್‌ನಿಂದ ಬಂದಿದ್ದಳು. ಆಕೆ ರವಿಕೆ ಧರಿಸಿದ್ದಳು. ಈ ವಿಷಯ ತಿಳಿದ ರಾಣಿ ಆಕೆಯನ್ನು ಕರೆಯಿಸಿ ರಾಜಭಟರಿಂದ ಆಕೆಯ ಸ್ತನಗಳನ್ನು ಕೊಚ್ಚಿ ಹಾಕಿಸಿದ್ದಳು. ಟ್ರಾವಂಕೂರಿನ ಮಹಾರಾಣಿ ಒಂದು ಹೆಣ್ಣಾಗಿದ್ದುಕೊಂಡೇ ಹೆಣ್ಣು ಮಕ್ಕಳ ಮೇಲೆ ಇಂತಹ ಕ್ರೂರ ಪದ್ಧತಿಯನ್ನು ಜೀವಂತವಾಗಿಟ್ಟಿದ್ದಳು. ಅಂತಹ ಸಮಯದಲ್ಲಿ ಟ್ರಾವಂಕೂರಿನ ಬಲರಾಮಪುರ ಸವರ್ಣೀಯರ ಬೀದಿಯಲ್ಲಿ ಜಾತ್ರೆ ನಡೆಯುತಿತ್ತು.

ಆ ಜಾತ್ರೆಗೆ ದಲಿತ ಮಹಿಳೆಯೊಬ್ಬಳು ರವಿಕೆ ಧರಿಸಿ ಬಂದಿದ್ದಾಳೆಂದು ಅಕೆಯ ಮೇಲೆ ಅಕ್ರಮಣ ಮಾಡಿದ್ದರು. ಈ ವಿಷಯ ತಿಳಿದ ಅಯ್ಯನ್ ಕಾಳಿ ಸ್ಥಳಕ್ಕೆ ಧಾವಿಸಿ ಆ ಮಹಿಳೆಯ ಪರವಾಗಿ ನಿಂತರು. ಇದರಿಂದ ದಲಿತರು ಮತ್ತು ಸವರ್ಣೀಯರೊಡನೆ ಘರ್ಷಣೆ ಪ್ರಾರಂಭವಾಗಿ ಅದು ದೊಂಬಿಗೆ ತಿರುಗಿತು. ಇದನ್ನೇ ‘ಚಾಲಿಯಾರ್ ದೊಂಬಿ’ ಎಂದು ಕರೆಯುತ್ತಾರೆ. ಈ ದೊಂಬಿಯಲ್ಲಿ ರಕ್ತಪಾತ ನಡೆದು ಹಲವು ಜನರು ಇರಿತಕ್ಕೊಳಗಾಗಿದ್ದರು. ಆದರೂ ಛಲ ಬಿಡದೆ ಅಯ್ಯನ್ ಕಾಳಿ ಇದರಲ್ಲಿ ಯಶಸ್ವಿಯಾದರು. ಅಯ್ಯನ್ ಕಾಳಿಯ ಹೋರಾಟದ ಫಲವಾಗಿ ಟ್ರಾವಂಕೂರಿನಲ್ಲಿ ಎಲ್ಲ ಮಹಿಳೆಯರು ಎದೆಯ ಭಾಗ ಬಟ್ಟೆ ಧರಿಸುವಂತಾಯಿತು. ಅಯ್ಯನ್ ಕಾಳಿಯ ಪ್ರಬಲ ಹೋರಾಟದಿಂದ ಮಹಿಳೆಯರ ಮೇಲಿದ್ದ ಅನಿಷ್ಟ ಪದ್ಧ್ದತಿ ನಿಷೇಧವಾದವು. ದಲಿತರಿಗೆ ರಸ್ತೆ, ಹೊಟೇಲ್ ಅಂಗಡಿ ಎಲ್ಲವೂ ಮುಕ್ತವಾದವು. ಅಯ್ಯನ್ ಕಾಳಿಯು ಸಾಮಾಜಿಕ ಹೋರಾಟದ ನಂತರ ಅವರು ಕೈ ಹಾಕಿದ್ದು ಶೈಕ್ಷಣಿಕ ಹೋರಾಟದ ಕಡೆ. ಸ್ವತಃ ತಾನೇ ಅನಕ್ಷರಸ್ಥರಾಗಿದ್ದರೂ ಬೇರೆಯವರು ವಿದ್ಯಾಭ್ಯಾಸ ಮಾಡಬೇಕೆಂಬುದು ಅಯ್ಯನ್ ಕಾಳಿಯ ದೂರದೃಷ್ಟಿಯಾಗಿತ್ತು. ಅಯ್ಯನ್ ಕಾಳಿಯ ಕಾಲಘಟ್ಟದಲ್ಲಿ ಕೇರಳದ ಎಲ್ಲಿಯೂ ದಲಿತ ಮಕ್ಕಳಿಗೆ ಶಾಲೆ ಪ್ರವೇಶವಿರಲಿಲ್ಲ.

ದಲಿತ ಮಕ್ಕಳಿಗೆ ವಿದ್ಯಾಭ್ಯಾಸದ ಅಗತ್ಯವನ್ನು ಮನಗಂಡು ಅದನ್ನು ಅನುಷ್ಠಾನಕ್ಕೆ ತಂದವರಲ್ಲಿ ಅಯ್ಯನ್ ಕಾಳಿ ಮೊದಲಿಗರು. ಅಯ್ಯನ್ ಕಾಳಿಯ ಎತ್ತಿನಗಾಡಿಯನ್ನು ಓಡಿಸುವ ವ್ಯಕ್ತಿಯ ಬಳಿ 4 ಎಕರೆ ಜಮೀನು ಇತ್ತು. ಅದರಲ್ಲಿ 18 ಗುಂಟೆ ಜಾಗವನ್ನು ಕ್ರಯಕ್ಕೆ ತೆಗೆದುಕೊಂಡು ಅಲ್ಲಿ ಶಾಲೆ ನಿರ್ಮಿಸಲು ಮುಂದಾದರು. ಸ್ನೇಹಿತರೊಡನೆ ಸೇರಿಕೊಂಡು ಮಣ್ಣು ಕಲಸಿ ಗೋಡೆಗಳನ್ನು ಕಟ್ಟಿ ತೆಂಗಿನಗರಿಯ ಮೂಲಕ ಚಾವಣಿ ನಿರ್ಮಿಸುತ್ತಿದ್ದರು. ಬೆಳಗ್ಗೆ ಕಷ್ಟಪಟ್ಟು ಶಾಲೆ ನಿರ್ಮಾಣ ಮಾಡಿದರೆ ರಾತ್ರಿಯಾಗುತಿದ್ದಂತೆಯೇ ಸವರ್ಣೀಯರು ಬಂದು ಕೆಡವಿ ಹಾಕುತ್ತಿದ್ದರು. ದಿನ ನಿತ್ಯವೂ ಇದೇ ಪರಿಸ್ಥಿತಿ ಮುಂದುವರಿದಿತ್ತು. ಆಗ 1904ರ ಸಂದರ್ಭ, ಶಾಲೆ ಉಳಿಸಬೇಕೆನ್ನುವುದು ಅಯ್ಯನ್ ಕಾಳಿಯ ಧ್ಯೇಯ. ಶಾಲೆಯನ್ನು ಯಾವುದೇ ಕಾರಣಕ್ಕೂ ತೆರೆಯಲು ಬಿಡಬಾರದೆಂಬುದು ಸವರ್ಣೀಯ ಮನಸ್ಸುಗಳ ಅಜೆಂಡಾ. ಇದಕ್ಕೆ ಸಂಬಂಧಿಸಿದಂತೆ ಇತ್ತಂಡಗಳ ನಡುವೆ ಗಲಾಟೆ ನಡೆದು ಕೊಡಲಿ, ಮಚ್ಚುಗಳಿಂದ ಹೊಡೆದಾಡಿ ರಕ್ತವನ್ನೇ ಹರಿಸಿದರು. ಆನಂತರ ಶಾಲೆಯ ಕಡೆ ತಲೆ ಹಾಕದ ಸವರ್ಣೀಯರು ಸುಮ್ಮನಾದರು. ಶಾಲೆ ಆರಂಭವಾಯಿತು. ಮಕ್ಕಳಿಗೆ ಬರೆಯಲು ಸೀಮೆ ಸುಣ್ಣ ಮತ್ತು ಕರಿ ಹಲಗೆ ಇರದ ಕಾರಣ ಮರಳಿನಲ್ಲಿ ಬರೆಸುವ ಮೂಲಕ ದಲಿತ ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭ ಮಾಡಿಸಿದರು.

ಒಂದು ಶಾಲೆಯಿಂದ ಹೆಚ್ಚು ದಲಿತ ಮಕ್ಕಳಿಗೆ ವಿದ್ಯಾಭ್ಯಾಸಕೊಡಲು ಸಾಧ್ಯವಿಲ್ಲವೆಂದರಿತ ಅಯ್ಯನ್ ಕಾಳಿ ಸರಕಾರಕ್ಕೆ ಎಲ್ಲ ಕಡೆಯಲ್ಲಿಯೂ ದಲಿತರಿಗೆ ಪ್ರತ್ಯೇಕ ಶಾಲೆಗಳನ್ನು ಮಂಜೂರು ಮಾಡುವಂತೆ ಕೇಳಿಕೊಂಡರು. ಇದನ್ನು ಮನಗಂಡ ಸರಕಾರ ದಲಿತ ಮಕ್ಕಳಿಗೆ ಪ್ರತ್ಯೇಕವಾಗಿ ಶಾಲೆಗಳನ್ನು ಮಂಜೂರು ಮಾಡಿತು. ಆದರೆ ಪೋಷಕರು ಶಾಲೆಗೆ ಮಕ್ಕಳನ್ನು ಜಮೀನ್ದಾರರಿಗೆ ಹೆದರಿ ಕಳುಹಿಸುತ್ತಿರಲಿಲ್ಲ. ಮಕ್ಕಳು ಶಾಲೆಗೆ ಹೋದರೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುವವರು ಸಿಗುವುದಿಲ್ಲ ಎಂಬುದನ್ನು ಅರಿತ ಭೂ ಮಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಬಾರದೆಂದು ತಾಕೀತು ಮಾಡಿದ್ದರು.ಇದನ್ನರಿತ ಅಯ್ಯನ್ ಕಾಳಿ ಪೋಷಕರ ಮನವೊಲಿಸಿದರು. ‘‘ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭೂ ಮಾಲಕರು ಒಪ್ಪದಿದ್ದರೆ ನೀವು ಅವರ ಕೆಲಸಕ್ಕೆ ಹೋಗದೆ ಅಸಹಕಾರ ಚಳವಳಿ ಮಾಡಿ, ತಮ್ಮ ಜಮೀನಿನ ಕೆಲಸವನ್ನು ತಾವು ಮಾಡಿಕೊಳ್ಳಲಾಗದೆ ಅವರೇ ನಿಮ್ಮ ದಾರಿಗೆ ಬರುತ್ತಾರೆ’’ ಎಂದು ಮನವರಿಕೆ ಮಾಡಿಕೊಟ್ಟರು. ಅಯ್ಯನ್ ಕಾಳಿ ಹೇಳಿದಂತೆ ದಲಿತರು ಭೂ ಮಾಲಕರ ವಿರುದ್ಧ ಕೃಷಿ ಚಟುವಟಿಕೆಗೆ ಹೋಗದೆ ಅಸಹಕಾರ ಕೈಗೊಂಡರು. ಇದರಿಂದ ಎಲ್ಲ ಭೂ ಮಾಲಕರ ಜಮೀನುಗಳು ಪಾಳು ಬಿದ್ದವು. ಕೊನೆಗೆ ಭೂ ಮಾಲರೇ ‘‘ನಿಮ್ಮ ಮಕ್ಕಳನ್ನು ಶಾಲೆಗೆ ಕಲುಹಿಸಲು ಒಪ್ಪುತ್ತೇವೆ ದಯವಿಟ್ಟು ಕೆಲಸಕ್ಕೆ ಬನ್ನಿ’’ ಎಂದು ಕರೆಯುವಂತಾಯಿತು.

ಆನಂತರ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದರು.ಮಕ್ಕಳೇನೋ ಶಾಲೆಗೆ ಬಂದರು, ಆದರೆ ಅವರಿಗೆ ಪಾಠ ಹೇಳಿಕೊಡಲು ಯಾವ ಸವರ್ಣೀಯ ಶಿಕ್ಷಕರೂ ಒಪ್ಪಲಿಲ್ಲ. ಅಂದು ಉದಾರವಾದಿ ಹಾಗೂ ಪ್ರಗತಿಪರರೂ ಆಗಿದ್ದ ನಾಯರ್ ಜನಾಂಗದ ಪರಮೇಶ್ವರನ್ ಪಿಳ್ಳೆ ಮಾತ್ರ ಶಾಲಾ ಶಿಕ್ಷಕರಾಗಲು ಒಪ್ಪಿದರು. ಇದರಿಂದ ದಲಿತ ಮಕ್ಕಳು ವಿದ್ಯೆಕಲಿಯಲು ಪ್ರಾರಂಭ ಮಾಡಿದರು. ಇದು ಅಯ್ಯನ್ ಕಾಳಿಯು ಕೇರಳದಲ್ಲಿ ಮಾಡಿದ ಮಹೋನ್ನತ ಶಿಕ್ಷಣ ಕ್ರಾಂತಿ.

ಅಯ್ಯನ್ ಕಾಳಿ ನಡೆಸಿದ ಶಿಕ್ಷಣ ಕ್ರಾಂತಿಯ ನಂತರ ಕೈಗೆತ್ತಿಕೊಂಡ ಮಹತ್ತರವಾದ ಹೋರಾಟವೆಂದರೆ ವೈಕಂ ಸತ್ಯಾಗ್ರಹ. ವೈಕಂನಲ್ಲಿ ಮಹಾದೇವ ಮಂದಿರವಿದೆ. ಈ ಮಂದಿರಕ್ಕೆ ದಲಿತರಿಗಾರಿಗೂ ಪ್ರವೇಶ ಇರಲಿಲ್ಲ, ದೇವಸ್ಥಾನದ ಅಕ್ಕಪಕ್ಕದ ರಸ್ತೆಯಲ್ಲಿಯೂ ದಲಿತರು ಓಡಾಡುವಂತಿರಲಿಲ್ಲ. ಒಂದು ವೇಳೆ ಈ ಆಜ್ಞೆಯನ್ನು ಮೀರಿ ಓಡಾಡಿದರೆ ಅಂತಹವರ ತಲೆಗಳನ್ನು ಕಡಿಯಲಾಗುತಿತ್ತು. ಹೀಗೆ ಆಜ್ಞೆ ಮೀರಿ ಓಡಾಡಿದ ಅನೇಕ ದಲಿತರ ತಲೆಕಡಿದು ಪಕ್ಕದಲ್ಲಿರುವ ಹೊಂಡಕ್ಕೆ ಬಿಸಾಡಿರುವ ಅನೇಕ ಉದಾಹರಣೆಗಳು ಅಲ್ಲಿವೆ. 1925ರಲ್ಲಿ ದೇವಾಲಯ ಪ್ರವೇಶ ಹೋರಾಟ ಅಯ್ಯನ್ ಕಾಳಿ ನೇತೃತ್ವದಲ್ಲಿ ಪ್ರಾರಂಭವಾಯಿತು. ಘೋಷವಾಕ್ಯದೊಂದಿಗೆ ಜನನಡಿಗೆಯ ಮೂಲಕ ದೇವಾಲಯ ಪ್ರವೇಶ ಮಾಡುವುದಾಗಿ ಹೋರಾಟದ ರೂಪುರೇಷೆಯಾಗಿತ್ತು. ಹೋರಾಟವನ್ನು ನಿಲ್ಲಿಸಬೇಕೆಂದು ಕೆಲವು ಸವರ್ಣೀಯರು ಸಿವಿಲ್ ನ್ಯಾಯಾಲಯದ ಮೊರೆ ಹೋದರು. ಇದರ ಪರಿಣಾಮ ‘‘ಕೀಳು ಜಾತಿಯವರು ದೇವಾಲಯ ಪ್ರವೇಶಿಸುವಂತಿಲ್ಲ’’ ಎಂದು ಜಿಲ್ಲಾ ನ್ಯಾಯಾಧೀಶರೇ ಹೋರಾಟಕ್ಕೆ ಅನುಮತಿ ನಿರಾಕರಿಸಿದರು. ಆದ್ದರಿಂದ ಜನನಡಿಗೆಯ ಹೋರಾಟ ಸತ್ಯಾಗ್ರಹಕ್ಕೆ ಬದಲಾಯಿತು. ಈ ಸತ್ಯಾಗ್ರಹಕ್ಕೆ ಕಾಂಗ್ರೆಸ್ ಕೂಡ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಭಾಗಿಯಾಯಿತು. ಸತ್ಯಾಗ್ರಹ ತಾರಕಕ್ಕೇರಿತು. ಆನಂತರ ಗಾಂಧೀಜಿಯವರು ಮಧ್ಯಸ್ಥಿಕೆ ವಹಿಸಿ ಸವರ್ಣೀಯರ ಮನವೊಲಿಸಿದ ಬಳಿಕ ದೇವಾಲಯ ಪ್ರವೇಶಕ್ಕೆ ದಲಿತರಿಗೆ ಅನುಮತಿ ದೊರೆಯಿತು. ಅಯ್ಯನ್ ಕಾಳಿಯ ಇಂತಹ ಅನೇಕ ಹೋರಾಟಗಳ ಬಗೆ ಗಾಂಧೀಜಿಯವರು ಕೇಳಿ ಆ ಸಂದರ್ಭದಲ್ಲಿ ಪುಳಕಿತರಾಗಿದ್ದು ಉಂಟು.

ಈ ಎಲ್ಲಾ ಹೋರಾಟಗಳ ನಂತರ ಪ್ರಭಾವಿ ದಲಿತ ನಾಯಕನಾಗಿ ಬೆಳೆದ ಅಯ್ಯನ್ ಕಾಳಿ ಕಾರ್ಮಿಕ ಸಂಘಟನೆಗಳನ್ನು ಕಟ್ಟಿಕೊಂಡರು, ಆನಂತರ ಪ್ರಜಾಪ್ರತಿನಿಧಿ ಸಭೆಯ ಚುನಾಯಿತ ಪ್ರತಿನಿಧಿಯಾದರು. ತನ್ನ ಹೋರಾಟದ ಮೂಲಕ ನಾಗರಿಕ ಹಕ್ಕುಗಳನ್ನು ದೊರಕಿಸಿಕೊಟ್ಟ ಅಯ್ಯನ್ ಕಾಳಿಗೆ ದಲಿತರು ಸ್ವಂತ ಜಮೀನುಗಳನ್ನು ಹೊಂದಿಲ್ಲ, ಅವರಿಗೆ ಭೂ ಒಡೆತನ ಕೊಡಿಸಬೇಕೆಂಬ ಇನ್ನೊಂದು ಸಂಕಲ್ಪಮನೆಮಾಡಿತು. ಚುನಾಯಿತ ಪ್ರತಿನಿಧಿಯಾಗಿದ್ದ ಅವರು ಶ್ರೀಮೂಲಂ ತಿರುನಾಳ್ ಮಹಾರಾಜರಾಗಿದ್ದ ಸಂದರ್ಭದಲ್ಲಿ ಅವರೊಡನೆ ಮಾತನಾಡಿ ಸರಕಾರದ ವಶದಲ್ಲಿದ್ದ 500 ಎಕರೆ ಭೂಮಿಯನ್ನು ಮಂಜೂರು ಮಾಡಿಸಿಕೊಟ್ಟರು. 500 ಕುಟುಂಬಗಳಿಗೆ ತಲಾ ಒಂದೊಂದು ಎಕರೆಯಂತೆ 500 ಎಕರೆಯನ್ನು ಹಂಚಿಕೊಟ್ಟು ದಲಿತರಿಗೆ ಭೂಒಡೆತನ ಕೊಡಿಸಿದ ಅಯ್ಯನ್ ಕಾಳಿ ಅವರ ಹೋರಾಟ ಮತ್ತು ಪಾತ್ರ ಮಹತ್ವದ್ದಾಗಿತ್ತು. ಇಂದಿಗೂ ಕೂಡ ಕೇರಳದಲ್ಲಿ ಅಯ್ಯನ್ ಕಾಳಿ ಎಂದರೆ ಮನೆಮಾತು. ಅವರನ್ನು ಅಲ್ಲಿನ ಜನತೆ ‘ಮಹಾತ್ಮಾ ಅಯ್ಯನ್ ಕಾಳಿ’ ಎಂದೇ ಕರೆಯುತ್ತಾರೆ. ಇಂದು ಅವರ 157ನೇ ಜನ್ಮದಿನದ ಸಂಭ್ರಮ. ಇಂತಹ ಸುದಿನದಲ್ಲಿ ಅವರ ವಿಚಾರ ಮತ್ತು ಕ್ರಾಂತಿಯನ್ನು ಮತ್ತಷ್ಟು ಮುನ್ನೆಲೆಗೆ ತರುವ ಹಾಗೂ ವಿಸ್ತರಿಸುವ ಅಗತ್ಯವಿದೆ.

Writer - ಹಾರೋಹಳ್ಳಿ ರವೀಂದ್ರ

contributor

Editor - ಹಾರೋಹಳ್ಳಿ ರವೀಂದ್ರ

contributor

Similar News