ಎಸೆಸೆಲ್ಸಿ-ಪಿಯುಸಿ ಪರೀಕ್ಷಾ ಮಂಡಳಿಗಳ ವಿಲೀನ: ಸಚಿವ ಸುರೇಶ್ ಕುಮಾರ್

Update: 2020-08-28 12:37 GMT

ಬೆಂಗಳೂರು, ಆ.28: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳು ಸೆಪ್ಟಂಬರ್ ನಲ್ಲಿ ಆರಂಭವಾಗಲಿದ್ದು, ಅತ್ಯಂತ ಪಾರದರ್ಶಕವಾಗಿ ಹಾಗೂ ಶಿಕ್ಷಕರ ಸ್ನೇಹಿ ವರ್ಗಾವಣೆ ನೀತಿ ರೂಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕ ಮಿತ್ರ ಆ್ಯಪ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್ ಮಾದರಿಯಲ್ಲೆ ಶಿಕ್ಷಣ ಪರಿಷತ್ತನ್ನು ಆರಂಭಿಸಲಾಗುವುದು. ಇನ್ನು ಮುಂದೆ ಪದವಿಪೂರ್ವ ಪರೀಕ್ಷಾ ಮಂಡಳಿ ಮತ್ತು ಎಸೆಸೆಲ್ಸಿ ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸಿ ಎರಡೂ ಪರೀಕ್ಷೆ ಒಂದೇ ಮಂಡಳಿಯಿಂದ ನಡೆಸಲಾಗುವುದು ಎಂದರು.

ರಾಜ್ಯದಲ್ಲಿ ಉತ್ತಮ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿ ಜಿಲ್ಲೆಯಲ್ಲಿ ಒಂದು ಉತ್ತಮ ಶಾಲೆಗೆ `ಸ್ವಾಭಿಮಾನಿ' ಪ್ರಶಸ್ತಿ ನೀಡಲಾಗುವುದು. ಅದೇ ಮಾದರಿಯಲ್ಲೆ ಉತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ `ಆದರ್ಶ ಶಿಕ್ಷಕ' ಗೌರವ ಸಲ್ಲಿಸಲಾಗುವುದು ಎಂದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರಲಿದ್ದು, ವಿದ್ಯಾರ್ಥಿಗಳ ಪರಿಪೂರ್ಣ ಮನುಷ್ಯರನ್ನಾಗಿ ರೂಪಿಸಲು ನೂತನ ನೀತಿ ಸಹಕಾರಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News