ಬೆಂಗಳೂರು ಹಿಂಸಾಚಾರ ಪ್ರಕರಣ: ಕ್ಲೈಮ್ ಕಮಿಷನರ್ ಆಗಿ ನಿವೃತ್ತ ನ್ಯಾ.ಎಚ್.ಎಸ್.ಕೆಂಪಣ್ಣ ನೇಮಕ
ಬೆಂಗಳೂರು, ಆ,28: ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿಗಳ ಹಾನಿಯನ್ನು ಅಂದಾಜಿಸಲು ಹಾಗೂ ಪರಿಹಾರ ವಿತರಣೆ ಕುರಿತು ನಿರ್ಧಾರ ಕೈಗೊಳ್ಳಲು ಹೈಕೋರ್ಟ್ ನ ನಿವೃತ್ತ ನ್ಯಾ.ಎಚ್.ಎಸ್.ಕೆಂಪಣ್ಣ ನೇತೃತ್ವದಲ್ಲಿ ಕ್ಲೈಮ್ ಕಮಿಷನರ್ ನೇಮಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಕ್ಲೈಮ್ ಕಮಿಷನರ್ ನೇಮಕದ ಬಗ್ಗೆ ಸರಕಾರ ಅಧಿಕೃತ ಆದೇಶ ಹೊರಡಿಸಬೇಕು. ಹಾಲಿ ನ್ಯಾಯಮೂರ್ತಿಗಳಿಗೆ ಲಭಿಸುವ ಗೌರವ, ಸೌಕರ್ಯ ಹಾಗೂ ಅದಕ್ಕೆ ತಕ್ಕ ಗೌರವ ಧನ ನಿಗದಿ ಪಡಿಸಬೇಕೆಂದು ಆದೇಶ ನೀಡಿದೆ.
ಘಟನೆಯಲ್ಲಿ ಹಾನಿಗೊಳಗಾದವರಿಗೆ ಆರೋಪಿಗಳಿಂದಲೇ ಪರಿಹಾರ ಕೊಡಿಸಬೇಕು ಹಾಗೂ ತನಿಖೆಯನ್ನು ಸೂಕ್ತ ಏಜೆನ್ಸಿಗೆ ವರ್ಗಾಯಿಸಬೇಕು ಎಂಬ ಮನವಿಗಳನ್ನು ಹೊಂದಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಮಧ್ಯಂತರ ನಿರ್ದೇಶನ ನೀಡಿದೆ.
ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದಿಸಿ, ಗಲಭೆ ನಡೆಸಿ ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡಿದ ಆರೋಪಿಗಳಿಂದಲೇ ಪರಿಹಾರ ಕೊಡಿಸಬೇಕೆಂದು ಸುಪ್ರೀಂಕೋರ್ಟ್ 2009ರಲ್ಲಿ ಆದೇಶ ಹೊರಡಿಸಿದೆ ಎಂದು ಪೀಠಕ್ಕೆ ತಿಳಿಸಿದರು.