ಗುಲಾಂ ನಬಿ ಆಝಾದ್‍ರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದ ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ

Update: 2020-08-29 11:24 GMT
ಗುಲಾಂ ನಬಿ ಆಝಾದ್

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷಕ್ಕೆ ಸಕ್ರಿಯ, ಪೂರ್ಣಕಾಲಿಕ ನಾಯಕತ್ವ ಬೇಕು ಹಾಗೂ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದ 23 ಕಾಂಗ್ರೆಸ್ ನಾಯಕರ  ಪೈಕಿ ಒಬ್ಬರಾಗಿರುವ ಗುಲಾಂ ನಬಿ ಆಝಾದ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ, ಮಾಜಿ ವಿಧಾನಪರಿಷತ್ ಸದಸ್ಯ ನಸೀಬ್ ಪಠಾನ್ ಆಗ್ರಹಿಸಿದ್ದಾರೆ.

"ಈ ಪತ್ರದಿಂದ ತಮಗೆ ನೋವಾಗಿದೆ ಆದರೆ ಅದು ಈಗ ಮುಗಿದ ಅಧ್ಯಾಯ ಎಂದು ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿರುವ ಹೊರತಾಗಿಯೂ ಗುಲಾಂ ನಬಿ ಆಝಾದ್ ಅವರು ಮಾಧ್ಯಮದ ಜತೆ ಈ ಕುರಿತು ಮಾತನಾಡಿದ್ದಾರೆ ಹಾಗೂ ಮರುದಿನ ಫೇಸ್ ಬುಕ್‍ನಲ್ಲೂ ಪೋಸ್ಟ್ ಮಾಡಿದ್ದಾರೆ" ಎಂದು 2004 ಹಾಗೂ 2016ರ ನಡುವೆ ಪರಿಷತ್ ಸದಸ್ಯರಾಗಿದ್ದ ಪಠಾನ್ ಹೇಳಿದ್ದಾರೆ.

ಈ ಕುರಿತಂತೆ ಪಠಾನ್ ಒಂದು ವೀಡಿಯೋವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ. "ನಿಮಗೆ (ಆಝಾದ್) ಗೊತ್ತು ನೀವು ಮೊದಲ ಬಾರಿ  ಸ್ಪರ್ಧಿಸಿದಾಗ ನಿಮಗೆ 320 ಮತಗಳು ದೊರಕಿದ್ದವು. ನಂತರ ನೀವು ಎಲ್ಲಾ ಕಡೆಗೂ ನಾಮಕರಣಗೊಂಡು ಹೋಗಿದ್ದೀರಿ. ಪಕ್ಷದ ಬಗ್ಗೆ ಈ ರೀತಿ ಮಾತನಾಡುವುದು ಸೂಕ್ತವಲ್ಲ.'' ಎಂದು ಈ ವೀಡಿಯೋದಲ್ಲಿ ಪಠಾನ್ ಹೇಳಿದ್ದಾರೆ.

ಪಠಾನ್ ಅವರು ಆಝಾದ್ ಕುರಿತಂತೆ ಹೇಳಿಕೆ ನೀಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಆಝಾದ್ ಅವರು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿದ್ಧಾಗ 2017ರ ವಿಧಾನಸಭಾ ಚುನಾವಣೆ ನಂತರ ಮಾತನಾಡಿದ್ದ ಪಠಾನ್,  ಚುನಾವಣೆಯಲ್ಲಿ ಕಳಪೆ ನಿರ್ವಹಣೆ ತೋರಿದ್ದಕ್ಕಾಗಿ ಆಝಾದ್ ಅವರು ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News