ಯುಎಇ: ಇಸ್ರೇಲ್ ಬಹಿಷ್ಕಾರ ಮತ್ತು ಸಂಬಂಧಿತ ಕಾನೂನು ರದ್ದತಿಗೆ ಆದೇಶ

Update: 2020-08-29 15:16 GMT

ಅಬುಧಾಬಿ, ಆ.29: ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದದ ಘೋಷಣೆಯ ಹಿನ್ನೆಲೆಯಲ್ಲಿ, ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಯೆದ್ ಅಲ್‌ನಹ್ಯಾನ್ ಅವರು ಇಸ್ರೇಲ್ ಬಹಿಷ್ಕಾರ ಮತ್ತು ಇದಕ್ಕೆ ಸಂಬಂಧಿಸಿದ ದಂಡದ ಕುರಿತ ಕಾನೂನನ್ನು ರದ್ದುಗೊಳಿಸುವ ಆದೇಶ ಜಾರಿಗೊಳಿಸಿದ್ದಾರೆ.  ಅಧ್ಯಕ್ಷರು ಜಾರಿಗೊಳಿಸಿದ ಫೆಡರಲ್ ಆದೇಶ 2020ರ ಕಾನೂನು ಸಂಖ್ಯೆ 04ರ ಮೂಲಕ 1972ರ ಫೆಡರಲ್ ಕಾನೂನು ಸಂಖ್ಯೆ 15ನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಮತ್ತು ವಾಣಿಜ್ಯ ಸಹಕಾರ ಸಂಬಂಧಗಳನ್ನು ವಿಸ್ತರಿಸುವ ಪ್ರಯತ್ನ ಮತ್ತು ಜಂಟಿ ಸಹಯೋಗದ ಮೂಲಕ ಆರ್ಥಿಕ ಬೆಳವಣಿಗೆ ಮತ್ತು ತಂತ್ರಜ್ಞಾನ ನಾವೀನ್ಯತೆಗೆ ಉತ್ತೇಜನ ನೀಡಲು ದ್ವಿಪಕ್ಷೀಯ ಸಂಬಂಧ  ಪ್ರಾರಂಭಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ರೂಪಿಸುವ ಕ್ರಮವಾಗಿ ಈ ಆದೇಶ ಜಾರಿಯಾಗಿದೆ. ಇಸ್ರೇಲ್ ಬಹಿಷ್ಕಾರ ಕಾನೂನು ರದ್ದುಗೊಂಡ ಹಿನ್ನೆಲೆಯಲ್ಲಿ, ಯುಎಇಯಲ್ಲಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಇಸ್ರೇಲ್‌ನಲ್ಲಿ ನೆಲೆಸಿರುವ ಸಂಸ್ಥೆಗಳು ಅಥವಾ ವ್ಯಕ್ತಿಗಳೊಂದಿಗೆ, ಅಥವಾ ರಾಷ್ಟ್ರೀಯತೆಯಿಂದ ಇಸ್ರೇಲ್‌ಗೆ ಸೇರಿದವರೊಂದಿಗೆ ವಾಣಿಜ್ಯ, ಆರ್ಥಿಕ ಕಾರ್ಯನಿರ್ವಹಣೆ ಅಥವಾ ಇತರ ಯಾವುದೇ ವ್ಯವಹಾರ ನಡೆಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ. ಈ ಆದೇಶದ ಪ್ರಕಾರ, ಯುಎಇಯಲ್ಲಿ ಇಸ್ರೇಲ್‌ನ ಎಲ್ಲಾ ಸರಕು, ಉತ್ಪನ್ನಗಳ ವ್ಯಾಪಾರ ನಡೆಸುವುದಕ್ಕೆ ಅಥವಾ ಈ ವಸ್ತುಗಳನ್ನು ಹೊಂದಿರುವುದಕ್ಕೆ ಅನುಮತಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News