ವುಹಾನ್: ಮಂಗಳವಾರದಿಂದ ಶಾಲೆಗಳ ಪುನರಾರಂಭ

Update: 2020-08-29 15:58 GMT

ಬೀಜಿಂಗ್, ಆ.29: ಕೊರೋನ ವೈರಸ್ ಸೋಂಕಿನ ಮೂಲನೆಲೆಯಾಗಿದ್ದ ಮತ್ತು ಕೊರೋನ ಸೋಂಕಿನಿಂದ ತತ್ತರಿಸಿದ್ದ ಚೀನಾದ ವುಹಾನ್ ಪ್ರದೇಶದಲ್ಲಿ ಮಂಗಳವಾರ(ಸೆ.1)ರಿಂದ ಶಾಲೆಗಳು ಮತ್ತು ಶಿಶುವಿಹಾರಗಳು ಪುನರಾರಂಭಗೊಳ್ಳಲಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ವುಹಾನ್ ವಿವಿ ಕಳೆದ ಸೋಮವಾರ ಪುನರಾರಂಭವಾಗಿದೆ.

ಸೆ.1ರಿಂದ ಈ ಪ್ರದೇಶದ ಸುಮಾರು 2,842 ಶಿಕ್ಷಣ ಸಂಸ್ಥೆಗಳು ಕಾರ್ಯಾರಂಭ ಮಾಡಲಿದ್ದು 1.4 ಮಿಲಿಯನ್ ವಿದ್ಯಾರ್ಥಿಗಳು ಮತ್ತೆ ತರಗತಿಗೆ ಹಾಜರಾಗಲಿದ್ದಾರೆ. ಒಂದು ವೇಳೆ ಪರಿಸ್ಥಿತಿ ಬದಲಾಗಿ, ಮತ್ತೆ ಅಪಾಯದ ಪರಿಸ್ಥಿತಿ ತಲೆದೋರಿದರೆ , ಆನ್‌ಲೈನ್ ತರಗತಿಯಂತಹ ತುರ್ತು ಯೋಜನೆ ಸನ್ನದ್ಧವಾಗಿದೆ. ವಿದ್ಯಾರ್ಥಿಗಳು ಮಾಸ್ಕ್ ಧರಿಸಬೇಕು ಮತ್ತು ಸಾಧ್ಯವಿದ್ದಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಬಾರದು ಎಂದು ಸ್ಥಳೀಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹೊಸ ಪರಿಸ್ಥಿತಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಶಾಲೆಗಳಲ್ಲಿ ವ್ಯಾಯಾಮ, ತರಬೇತಿ ನಡೆಸಬೇಕು. ಕಾಯಿಲೆ ನಿಯಂತ್ರಣ ವ್ಯವಸ್ಥೆಯನ್ನು ಸಜ್ಜಾಗಿಡಬೇಕು. ಅನವಶ್ಯಕವಾಗಿ ಗುಂಪುಗೂಡುವಿಕೆಯನ್ನು ನಿರ್ಬಂಧಿಸಬೇಕು ಮತ್ತು ಆರೋಗ್ಯ ಇಲಾಖೆಗೆ ದೈನಂದಿನ ವರದಿ ಸಲ್ಲಿಸಬೇಕು. ಶಾಲೆಗಳಿಂದ ಸೂಚನೆ ಪಡೆಯದ ವಿದೇಶಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮರಳಿ ಬರಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News