ಅಧಿಕಾರಕ್ಕೆ ಬಂದರೆ ಪ್ಯಾರಿಸ್, ಇರಾನ್ ಒಪ್ಪಂದ ಮರುಸ್ಥಾಪನೆ : ಕಮಲಾ ಹ್ಯಾರಿಸ್

Update: 2020-08-29 16:03 GMT

ವಾಷಿಂಗ್ಟನ್, ಆ.29: ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅಮೆರಿಕ ಮರುಸೇರ್ಪಡೆಯಾಗಲಿದೆ ಮತ್ತು ಇರಾನ್ ಜೊತೆಗಿನ ಪರಮಾಣು ಒಪ್ಪಂದಕ್ಕೆ ಪುನಶ್ಚೇತನ ನೀಡಿ ಅದನ್ನು ಬಲಪಡಿಸುವ ಮೂಲಕ ಜಗತ್ತಿನಲ್ಲಿ ಅಮೆರಿಕದ ಶಕ್ತಿಯನ್ನು ಮರುಸ್ಥಾಪಿಸಲಾಗುವುದು ಎಂದು ಭಾರತೀಯ ಮೂಲದ ಅಮೆರಿಕನ್ ಸಂಸದೆ, ಅಮೆರಿಕದ ಉಪಾಧ್ಯಕ್ಷೀಯ ಚುನಾವಣೆಯ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹೇಳಿದ್ದಾರೆ. ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಜೊತೆ ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಕಮಲಾ ಹ್ಯಾರಿಸ್, ಏಶ್ಯಾ ಮತ್ತು ಯುರೋಪ್‌ನ ಮಿತ್ರರಾಷ್ಟ್ರಗಳು ಅಮೆರಿಕದ ಮೇಲಿಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ಮರಳಿ ಗಳಿಸಲು ತಮ್ಮ ಪಕ್ಷ ಬದ್ಧವಾಗಿದೆ ಎಂದು ಶುಕ್ರವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ನಿಧಿ ಸಂಗ್ರಹ ಸಭೆಯಲ್ಲಿ ಘೋಷಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತವರ ಆಡಳಿತ ನಡೆಸಿರುವ ಹಾನಿಯನ್ನು ಸರಿಪಡಿಸುವ ಮತ್ತು ವಿಶ್ವದಲ್ಲಿ ನಮ್ಮ ಸ್ಥಾನವನ್ನು ಮರಳಿ ಸ್ಥಾಪಿಸುವ ಬೃಹತ್ ಸವಾಲು ಜೋ ಬಿಡೆನ್ ಹಾಗೂ ನಮ್ಮ ಆಡಳಿತಕ್ಕೆ ಎದುರಾಗಲಿದೆ. ಆದರೆ ಈ ಸವಾಲನ್ನು ಎದುರಿಸಿ ನಾವು ಯಶಸ್ವಿಯಾಗಲಿದ್ದೇವೆ ಎಂದವರು ಹೇಳಿದ್ದಾರೆ. ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕಕ್ಕೆ ಮಿಲಿಯಾಂತರ ಡಾಲರ್ ಹೊರೆ ಬೀಳುವ ಜೊತೆಗೆ, ಉದ್ಯೋಗ ನಷ್ಟವಾಗಲಿದೆ. ಅಲ್ಲದೆ ಕೈಗಾರಿಕೆ, ತೈಲ, ಅನಿಲ, ಗಣಿ ಕ್ಷೇತ್ರಗಳಿಗೆ ತೊಡಕಾಗಲಿದೆ ಎಂದು ಹೇಳಿದ್ದ ಡೊನಾಲ್ಡ್ ಟ್ರಂಪ್, ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿ 2017ರಲ್ಲಿ ಘೋಷಿಸಿದ್ದರು. ಮರುವರ್ಷವೇ, 2015ರ ಇರಾನ್ ಪರಮಾಣು ಒಪ್ಪಂದದಿಂದಲೂ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಐತಿಹಾಸಿಕವಾಗಿ, ಒಂದು ದೇಶವಾಗಿ ಮುನ್ನಡೆಯುವುದು ನಮ್ಮ ಶಕ್ತಿಯ ಒಂದು ಭಾಗವಾಗಿದೆ. ಕೇವಲ ನಮ್ಮ ಮಿಲಿಟರಿ ಶಕ್ತಿ ಅಥವಾ ನಮ್ಮ ಆರ್ಥಿಕ ಬಲವೇ ನಮ್ಮ ಶಕ್ತಿಯಲ್ಲ. ನಾವು ಏನನ್ನಾದರೂ ಹೇಳಿದರೆ ಅದನ್ನು ಅರ್ಥೈಸುತ್ತೇವೆ ಎಂಬ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಶಕ್ತಿಯ ಭಾಗವಾಗಿದೆ. ಪ್ಯಾರಿಸ್ ಒಪ್ಪಂದವಾಗಿರಲಿ ಅಥವಾ ನೇಟೋ ಒಪ್ಪಂದವಾಗಿರಲಿ, ನಾವು ಕೊಟ್ಟ ಮಾತನ್ನು , ನಮ್ಮ ಬದ್ಧತೆಯನ್ನು ಉಳಿಸಿಕೊಳ್ಳುವ ಮೂಲಕ ಮಿತ್ರರೊಂದಿಗೆ ನಿಷ್ಟರಾಗಿರುತ್ತೇವೆ. ಆದರೆ ಡೊನಾಲ್ಡ್ ಟ್ರಂಪ್ ಇದಕ್ಕೆ ತಪ್ಪಿದ್ದಾರೆ. ನೀಡುವ ವಾಗ್ದಾನದಲ್ಲಿರುವ ಸ್ಥಿರತೆ ಮತ್ತು ಸಮಗ್ರತೆಯ ಮಹತ್ವವನ್ನು ಅವರು ಅರಿತಿಲ್ಲ. ಇದು ಅವರ ಸ್ವಭಾವದ ಲಕ್ಷಣವಾಗಿದೆ ಎಂದು ಕಮಲಾ ಟೀಕಿಸಿದ್ದಾರೆ.

2009ರಲ್ಲಿ, ಜಾಗತಿಕ ಆರ್ಥಿಕತೆ ಕುಸಿತದ ಅಂಚಿನಲ್ಲಿದ್ದಾಗ ವಾಹನ ಉತ್ಪಾದನಾ ಕ್ಷೇತ್ರಕ್ಕೆ ಪುನಶ್ಚೇತನ ನೀಡುವ ಕಾರ್ಯವನ್ನು ಆಗಿನ ಅಧ್ಯಕ್ಷ ಒಬಾಮಾ ಅವರು ಜೋ ಬಿಡೆನ್‌ಗೆ ವಹಿಸಿದ್ದರು. ಜೋ ಬಿಡೆನ್ ಮಿಷಿಗನ್‌ನ ಜನತೆಯ ಬೆನ್ನುತಟ್ಟಿ ಪ್ರೋತ್ಸಾಹಿಸಿದರು ಮತ್ತು ದೇಶದ ಆರ್ಥಿಕತೆಯ ಪ್ರಗತಿಗೆ ನಿಮ್ಮಿಂದ ಸಾಧ್ಯವಿರುವುದನ್ನು ಕೊಡುಗೆ ನೀಡಿ ಎಂದು ಹುರಿದುಂಬಿಸಿದರು. ಇದರಿಂದ ವಾಹನ ಉದ್ಯಮ ಚೇತರಿಸಿಕೊಂಡಿದೆ. ಈಗ ಮತ್ತೆ ನಮ್ಮೆದುರು ಬೆಟ್ಟದಂತ ಸವಾಲಿದೆ. ಆದರೆ ದೇವರ ದಯೆ, ಜೋ ಬಿಡೆನ್ ಮತ್ತೆ ಬಂದಿದ್ದಾರೆ. ಟ್ರಂಪ್ ಆಡಳಿತದಿಂದ ಹಿನ್ನಡೆ ಕಂಡಿರುವ ಅಮೆರಿಕದ ಉತ್ಪಾದನಾ ಕ್ಷೇತ್ರಕ್ಕೆ ಮತ್ತೆ ಜೀವ ತುಂಬಲಿದ್ದಾರೆ ಎಂದು ಕಮಲಾ ಹೇಳಿದ್ದಾರೆ. ದೇಶದ ಮಧ್ಯಮ ವರ್ಗವನ್ನು ಬಿಡೆನ್ ಮತ್ತು ತಾನು ಜೊತೆಗೂಡಿ ಮರುನಿರ್ಮಿಸಲು ಬದ್ಧರಾಗಿದ್ದೇವೆ. ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಸಾಕ್ಷಿಯಾಗಿರುವ ಉತ್ಪಾದನಾ ವಲಯವನ್ನು ಪುನರುಜ್ಜೀವನಗೊಳಿಸಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮತ್ತು ಪೈಪೋಟಿ ಎದುರಿಸಲು ಸಣ್ಣ ಉದ್ಯಮಗಳಿಗೆ ನೆರವಾಗಲಿದ್ದೇವೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News