×
Ad

ಹಿಂಸಾಚಾರ ಪ್ರಕರಣದಲ್ಲಿ ಕೋಕಾ ದಾಖಲಿಸಲು ಕೋರಿ ಪಿಐಎಲ್: ಅಖಂಡ ಶ್ರೀನಿವಾಸ್‍ಗೆ ಹೈಕೋರ್ಟ್ ನೋಟಿಸ್

Update: 2020-08-29 22:42 IST

ಬೆಂಗಳೂರು, ಆ.29: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಕೊಕಾ ಕಾಯ್ದೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಶಾಸಕ ಅಖಂಡ ಶ್ರೀನಿವಾಸ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ವಕೀಲ ಎನ್. ಪಿ. ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರ ವಕೀಲರ ವಾದ ಆಲಿಸಿದ ಪೀಠ, ಅರ್ಜಿಯಲ್ಲಿ 6ನೆ ಪ್ರತಿವಾದಿಯಾಗಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವಾದ ಮಂಡಿಸಿದ ವಕೀಲ ಅಮೃತೇಶ್, ಆಗಸ್ಟ್ 11ರಂದು ನಡೆದ ಗಲಭೆಯಲ್ಲಿ ಶಾಸಕರ ಮನೆಗೆ ಸಾಕಷ್ಟು ಹಾನಿಯಾಗಿದ್ದು, ಈ ಸಂಬಂಧ 14ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಆ ಬಳಿಕ ಶಾಸಕರು ಪೊಲೀಸ್ ಆಯುಕ್ತರ ಕಚೇರಿ ಹಾಗೂ ಪೊಲೀಸ್ ಠಾಣೆಗೆ ಪದೇ ಪದೇ ಭೇಟಿ ನೀಡಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ. ಇದು ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಹೀಗಾಗಿ, ಈ ಕುರಿತು ಅವರಿಗೆ ಅಗತ್ಯ ನಿರ್ದೇಶನ ನೀಡಬೇಕೆಂದು ಕೋರಿದರು. ವಾದ ಪರಿಗಣಿಸಿದ ಪೀಠ, ಶಾಸಕರಿಗೆ ನೋಟಿಸ್ ಜಾರಿಗೆ ಆದೇಶಿಸಿತು.

ಆಕ್ಷೇಪಣೆ ಸಲ್ಲಿಸಲು ಸೂಚನೆ: ಗಲಭೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲು ನಿರ್ದೇಶಿಸುವಂತೆ ಕೋರಿ ನಗರದ ಗಿರೀಶ್ ಭಾರದ್ವಾಜ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಪೀಠ, ಸದ್ಯಕ್ಕೆ ಈ ವಿಚಾರದಲ್ಲಿ ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News