ಬುಡ ಅಲ್ಲಾಡಿಸುತ್ತಿರುವ ಭೂಷಣ್ ಟ್ವೀಟ್ಸ್

Update: 2020-08-29 19:30 GMT

ಗೋಮುಖವ್ಯಾಘ್ರ ಸರ್ವಾಧಿಕಾರತ್ವವು ಪ್ರಶಾಂತ್ ಭೂಷಣ್‌ರ ಟ್ವೀಟ್‌ಗಳನ್ನು ನೆಪ ಮಾಡಿಕೊಂಡು ಸಾರ್ವಜನಿಕ ಹಿತಾಸಕ್ತಿಯ ಧ್ವನಿಯನ್ನು ದಮನಮಾಡಲು ಸರ್ವೋಚ್ಚ ನ್ಯಾಯಾಲಯವನ್ನೇ ಬಳಸಿಕೊಂಡುಬಿಟ್ಟಿತು ಅನ್ನಿಸುತ್ತದೆ. ಇದನ್ನೆಲ್ಲಾ ಬರೆಯುತ್ತಾ, ಕೋಪ ತಾಪ ವಿಷಾದಗಳನ್ನು ದಾಟಿಕೊಂಡು ಮನಸ್ಸು ತಿಳಿಯಾದಾಗ, ಗಾಂಧಿ-ಅಂಬೇಡ್ಕರ್-ಜೆಪಿ ವರ್ಚಸ್ಸಿನ ನಾಯಕತ್ವದ ಹುಟ್ಟಿಗೆ ಭಾರತಮಾತೆ ಕಾವು ಕೊಡುತ್ತಿರಬೇಕು, ಅದಕ್ಕಾಗಿಯೇ ಭೂಷಣ್‌ರ ಮೇಲೆ ಆರೋಪ, ಅದಕ್ಕಾಗಿಯೇ ಈ ನೆಲದ ಪ್ರಜ್ಞೆಗಳಾದ ಆನಂದ್ ತೇಲ್ತುಂಬ್ಡೆ ಮತ್ತಿತರರನ್ನು ರಾಜಕೀಯ ಕೈದಿ ಮಾಡಿ ಬಂಧನದಲ್ಲಿಟ್ಟಿರುವುದು ಇದ್ದಿರಬಹುದೆ ಅನ್ನಿಸಿತು.


ಮೊನ್ನೆ ಹಿರಿಯ ವಕೀಲರಾದ ರವಿವರ್ಮ ಕುಮಾರ್ ಅವರಿಗೆ ಫೋನ್ ಮಾಡಿ ‘‘ಹೇಗಿದೆ ನಮ್ಮ ಸುಪ್ರೀಂ ಕೋರ್ಟ್‌ನ ಯೋಗಕ್ಷೇಮ?’’ ಎಂದು ಕೇಳಿದೆ. ಪ್ರಶಾಂತ್ ಭೂಷಣ್ ಅವರ ಟ್ವೀಟ್‌ಗಳಿಂದ - ನ್ಯಾಯಾಲಯ ನಿಂದನೆ (Contempt of Court) ಆಗಿದೆ ಎಂದು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ತ್ರಿಸದಸ್ಯ ಪೀಠ ತೀರ್ಪಿತ್ತ ಹಿನ್ನೆಲೆಯಲ್ಲಿ ನಾವು ಮಾತಾಡುತ್ತಿದ್ದೆವು. ರವಿ ಹೇಳಿದರು - ‘‘ನ್ಯಾಯಾಂಗವೇ ಆರೋಪ ಮಾಡುವುದು; ಅದೇ ಮೊಕದ್ದಮೆಯನ್ನೂ ಹೂಡಿ, ಮತ್ತೆ ಅದೇನೇ ಆರೋಪವನ್ನು ಸಾಬೀತುಪಡಿಸುವುದು, ಆಮೇಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ಕೊಡುವುದು ನಮ್ಮ ಸುಪ್ರೀಂಕೋರ್ಟ್‌ನಲ್ಲಿ ನಡೆದು ಹೋಯಿತು’’ ಅಂದರು. ಯಾಕೆಂದರೆ, ಆ ತೀರ್ಪಿಗೆ ಪ್ರಶಾಂತ್ ಭೂಷಣ್ ಸಲ್ಲಿಸಿದ ಪ್ರಮಾಣಪತ್ರವನ್ನು ಆ ತ್ರಿಸದಸ್ಯ ಪೀಠ ಗಂಭೀರವಾಗಿ ಪರಿಗಣಿಸಲಿಲ್ಲ. ನಿಷ್ಪಕ್ಷಪಾತ ನಿಲುವಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ತಕ್ಕಡಿ ಹಿಡಿದು ನಿಂತ ನ್ಯಾಯದೇವತೆ ಪ್ರತಿಮೆ ಸುಪ್ರೀಂಕೋರ್ಟ್‌ನಲ್ಲಿ ಇರುವುದೇ ಇಲ್ಲವೇ ಒಮ್ಮೆ ನೋಡಿ ಬರಬೇಕೆನ್ನಿಸಿತು. ಯಾಕೆಂದರೆ ನ್ಯಾಯಾಲಯದ ಆ ತೀರ್ಪು ಕುರುಡಾಗಿತ್ತು. ಈ ತೀರ್ಪನ್ನು ಸುಪ್ರೀಂಕೋರ್ಟ್ ವಕೀಲ ಗೌತಮ್ ಬಾಟಿಯಾ ಒಂದು ರೂಪಕದಲ್ಲಿ ಸೆರೆಹಿಡಿಯುತ್ತಾರೆ-‘‘ಬಾಲ್ಯ ಕಾಲದ ನನ್ನ ಫುಟ್‌ಬಾಲ್ ಆಟ ನೆನಪಾಗುತ್ತಿದೆ... ಆಟದ ಮೈದಾನದಲ್ಲಿ ನಾನು ಫುಟ್‌ಬಾಲನ್ನು ಆಫ್‌ವೇ ಲೈನ್‌ನಿಂದ ಎದುರಾಳಿಗಳಿಗೆ ಚೆಂಡು ಸಿಗದಂತೆ ಮಾಡುವ ಚಾಕಚಕ್ಯತೆಯ ಡ್ರಿಬಲ್ ಮಾಡುತ್ತಾ ಗುರಿಯಿಟ್ಟು ಒದ್ದು ಗೋಲ್ ಗಳಿಸುತ್ತಿದ್ದೆ... ಯಾರೂ ಎದುರಾಳಿಗಳು ಇಲ್ಲದ ಆ ಆಟದ ಮೈದಾನದಲ್ಲಿ!’’ ಈ ಆಟ ನ್ಯಾಯಾಲಯದೊಳಗೆ ನಡೆದು ಬಿಟ್ಟಿತು.

ಆಯ್ತು, ಪ್ರಶಾಂತ್ ಭೂಷಣ್ ಟ್ವೀಟ್‌ನೊಳಗೆ ಏನಿದೆ? ಅದು ಹೀಗಿದೆ -‘‘ಭವಿಷ್ಯದಲ್ಲಿ ಇತಿಹಾಸಕಾರರು ಕಳೆದ ಆರು ವರ್ಷಗಳ ಬಗ್ಗೆ ಬರೆಯುವಾಗ, ಹೇಗೆ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸದೆಯೇ ಪ್ರಜಾತಂತ್ರವನ್ನು ನಾಶಮಾಡಲಾಯಿತು ಎಂದು ದಾಖಲಿಸುವಾಗ ಈ ವಿಷಯದಲ್ಲಿ ಸುಪ್ರೀಂಕೋರ್ಟ್‌ನ ಹಿಂದಿನ ನಾಲ್ಕು ಮುಖ್ಯ ನ್ಯಾಯಾಧೀಶರ ಪಾತ್ರವನ್ನು ಗುರುತಿಸುತ್ತಾರೆ’’ - ಈ ಟ್ವೀಟ್ ಆತ್ಮಾವಲೋಕನಕ್ಕೆ ಕಾರಣವಾಗಬೇಕಿತ್ತು. ಕುಸಿಯುತ್ತಿರುವ ನ್ಯಾಯಾಂಗದ ಘನತೆ ಕಾಪಾಡಲು ಒದ್ದಾಡುತ್ತಿರುವ ಸಂಕಟದಂತೆ ಆ ಟ್ವೀಟ್‌ಗಳ ನುಡಿಗಳು ಕಾಣಿಸಬೇಕಿತ್ತು. ಆದರೆ ಪ್ರಶಾಂತ್ ಭೂಷಣ್‌ರ ಆ ಟ್ವೀಟ್‌ಗಳು ನ್ಯಾಯಾಂಗದ ಬುಡವನ್ನೇ ಅಲ್ಲಾಡಿಸುತ್ತಿವೆ ಎಂಬಂತೆ ನ್ಯಾಯಾಧೀಶರ ತ್ರಿಸದಸ್ಯ ಪೀಠ ಭಾವಿಸಿ, ತಮ್ಮ ಭಾವನೆಗಳೇ ನ್ಯಾಯ ಅಂದುಕೊಂಡಂತೆ ಜೊತೆಗೆ ಭೀತಿಗೆ ಒಳಗಾದವರಂತೆ ತೀರ್ಪು ನೀಡಿದ್ದಾರೆ. ಇಂದು ಈ ಭೀತಿ ನ್ಯಾಯಾಂಗವನ್ನು ಮಾತ್ರವಲ್ಲ, ಇಡೀ ದೇಶವನ್ನೇ ಆವರಿಸಿಕೊಂಡಿದೆ.

ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಅಷ್ಟೇಕೆ ಮಾಧ್ಯಮ ಕ್ಷೇತ್ರಗಳನ್ನೂ ಈ ಭೀತಿ ಬಿಟ್ಟಿಲ್ಲ. ಈ ಭೀತಿ ಯಾವ ಸ್ವಾಯತ್ತ ಸಂಸ್ಥೆಗಳನ್ನೂ ಸ್ವಾಯತ್ತವಾಗಿ ಉಳಿಸಿಲ್ಲ. ಈ ಭೀತಿ ಬಗ್ಗೆ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ ಹೇಳಿಕೆಯೊಂದು ಸುಳಿವು ನೀಡುತ್ತದೆ - ‘‘ಗೊಗೋಯಿ ಅವರನ್ನು ನ್ಯಾಯಮೂರ್ತಿ ಎಂದು ಕರೆಯಲು ನನ್ನ ಮನಸ್ಸು ಒಪ್ಪುವುದಿಲ್ಲ... ಅಕ್ಷರಶಃ ಗೊಗೋಯಿ ಅವರು ಆಳುವ ಬಿಜೆಪಿ ಸರಕಾರದ ಕಾಲಿಗೆ ಬಿದ್ದು ನಮಸ್ಕರಿಸಿದರು. ಬಹುತೇಕ ಸುಪ್ರೀಂ ಕೋರ್ಟ್‌ನ್ನು ರಾಜಕೀಯ ಕಾರ್ಯಾಂಗದ ವಶಕ್ಕೆ ಒಪ್ಪಿಸಿದರು’’ ಎನ್ನುತ್ತಾರೆ. ಅದಕ್ಕಾಗಿಯೇ ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಜಕೀಯ ನಾಯಕರು, ‘‘ನಾವು ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ’’ ಎಂದು ಹೇಳಿದರೆ ಅದು ನ್ಯಾಯಾಲಯ ನಿಂದನೆ ಆಗುವುದಿಲ್ಲ! ಸಂವಿಧಾನವನ್ನು ಸುಟ್ಟರೂ ಅದು ನ್ಯಾಯಾಲಯ ನಿಂದನೆ ಆಗುವುದಿಲ್ಲ! ಆದರೆ ನ್ಯಾಯಾಂಗದ ಘನತೆಯನ್ನು ಕಾಪಾಡಲು ತಹತಹಿಸುವ ಪ್ರಶಾಂತ್ ಭೂಷಣ್‌ರ ಟ್ವೀಟ್‌ಗಳು ನ್ಯಾಯಾಲಯದ ನಿಂದನೆಯಾಗಿ ಆ ನ್ಯಾಯಮೂರ್ತಿಗಳಿಗೆ ಕಾಣಿಸುತ್ತಿದೆ. ಇದನ್ನೆಲ್ಲಾ ನೋಡಿದಾಗ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ ಮಾತುಗಳು ಮನಸ್ಸನ್ನು ಆವರಿಸಿಕೊಳ್ಳುತ್ತವೆ.

ಸ್ವಾತಂತ್ರ್ಯಾನಂತರ ಎಂದೂ ಭಾರತಕ್ಕೆ ಇಂತಹ ಸ್ಥಿತಿ ಬಂದಿರಲಿಲ್ಲವೇನೋ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಕಾಲದಲ್ಲೂ ಕೂಡ. ಆ ಕಾಲದಲ್ಲಿ ನ್ಯಾಯಾಂಗ, ಚುನಾವಣಾ ಆಯೋಗ, ದೇಶದ ಒಕ್ಕೂಟ ಸ್ವರೂಪ, ಆರ್‌ಬಿಐ, ಸಿಬಿಐ, ಮಾಧ್ಯಮ ಇತ್ಯಾದಿ ಹಾಗೂ ಸ್ವಾಯತ್ತ ಸಂಸ್ಥೆಗಳಿಗೆ ಉಗುರು ಹಲ್ಲುಗಳು ಇದ್ದವು. ಅವು ಪ್ರತಿರೋಧ ತೋರಿಸುತ್ತಿದ್ದವು. ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿ ಅದು ವ್ಯಾಘ್ರ ತುರ್ತು ಪರಿಸ್ಥಿತಿಯಾಗಿತ್ತು. ಹಾಗೇ ಇಂದಿರಾ ವ್ಯಾಘ್ರ ಸರ್ವಾಧಿಕಾರಿಯೂ ಆಗಿದ್ದರು. ಆಗೆಲ್ಲ ನೇರಾನೇರಾ ಇತ್ತು. ಎದುರುಬದುರು ಆಗುತ್ತಿತ್ತು. ದಮನಿಸಿದರೂ ಪ್ರತಿಭಟನೆಗಳು ಉಕ್ಕುತ್ತಿದ್ದವು. ಆದರೀಗ? ಈಗ ಇರುವುದು ಗೋಮುಖವ್ಯಾಘ್ರ ತುರ್ತು ಪರಿಸ್ಥಿತಿ. ಇದು ನೋಟಕ್ಕೆ ನಾಜೂಕಾಗಿ ಉದ್ಧಾರಕನಂತೆ ಕಾಣಿಸಿಕೊಳ್ಳುತ್ತದೆ. ಒಳಗೆ ಮಾಡಬಾರದ್ದನ್ನೆಲ್ಲಾ ಮಾಡುತ್ತಿರುತ್ತದೆ. ಇದು ಮುಖಾಮುಖಿಯಾಗುವುದೇ ಇಲ್ಲ. ಬದಲಾಗಿ, ಸಂವಿಧಾನದ ನಾಲ್ಕು ಅಂಗಗಳು ಅಂತೀವಲ್ಲಾ ಅದು ಹಾಗೂ ಎಲ್ಲಾ ಸ್ವಾಯತ್ತ ಸಂಸ್ಥೆಗಳು ಮತ್ತು ದೇಶದ ಒಕ್ಕೂಟ ಸ್ವರೂಪ ಈ ಎಲ್ಲದರ ಕತ್ತಿನ ನರ, ಹಿಮ್ಮಡಿ ನರ ಕತ್ತರಿಸಿ ಇಟ್ಟುಕೊಂಡಿರುತ್ತದೆ. ಈ ಸಂಸ್ಥೆಗಳಿಗೆ ಅವವೇ ಆಕಾರ ಇರುತ್ತದೆ ನಿಜ. ಆದರೆ ಒಳಗೆ ಅರೆಜೀವ. ಹಾಗಾಗಿ ಎಲ್ಲವೂ ರಾಜಕೀಯ ಕಾರ್ಯಾಂಗದ ಉರುಫ್ ಗೋಮುಖವ್ಯಾಘ್ರ ಸರ್ವಾಧಿಕಾರಿಯ ಇಚ್ಛೆ, ಕಣ್ಸನ್ನೆ ಅರಿತು ಕಾರ್ಯ ನಿರ್ವಹಿಸುವಂತಾಗಿಬಿಟ್ಟಿದೆ. ಇದನ್ನು ಸ್ಪಷ್ಟ ಪಡಿಸುವುದಕ್ಕಾಗಿ, ಇತ್ತೀಚೆಗೆ ಅಮೆರಿಕದಲ್ಲಿ ಆಫ್ರೊ-ಅಮೆರಿಕನ್ ಜನಾಂಗದ ಕರಿಯ ವ್ಯಕ್ತಿಯನ್ನು ಅಲ್ಲಿನ ಪೋಲಿಸರು ಕತ್ತು ಹಿಸುಕಿ ಕೊಂದಾಗ ಭುಗಿಲೆದ್ದ ಹಿಂಸೆಗೆ ಪ್ರತಿಕ್ರಿಯಿಸುತ್ತ ಯೂರೋ-ಅಮೆರಿಕನ್ ಜನಾಂಗಕ್ಕೆ ಸೇರಿದ ಅಮೆರಿಕದ ಅಧ್ಯಕ್ಷ ಟ್ರಂಪ್ -‘‘ಡಾಮಿನೇಟ್... ಹಿಡಿತ ಸಾಧಿಸಿ’’ ಎಂದು ಕರೆ ಕೊಟ್ಟಾಗ ಅದಕ್ಕೆ ಪೊಲೀಸ್ ಚೀಫ್ Acevedo ದಿಟ್ಟತನದಿಂದ ‘‘ಬೇಕಾಗಿರುವುದು ಇಲ್ಲಿ ಡಾಮಿನೇಟ್ ಮಾಡುವುದಲ್ಲ, ಹೃದಯ ಗೆಲ್ಲೋದು. ನಿಮ್ಮ ತಿಳಿಗೇಡಿತನದಿಂದ ಪರಿಸ್ಥಿತಿ ಹಾಳಾಗುವುದು ಬೇಡ. ಅಧ್ಯಕ್ಷ ಟ್ರಂಪ್ ಅವರಿಗೆ ಏನಾದರೂ ರಚನಾತ್ಮಕವಾಗಿ ಹೇಳುವುದಿದ್ದರೆ ಹೇಳಲಿ, ಇಲ್ಲದಿದ್ದರೆ ಬಾಯಿ ಮುಚ್ಚಿಕೊಂಡಿರಲಿ’’ ಎನ್ನುತ್ತಾರೆ.

ಈ ಹಿನ್ನೆಲೆಯನ್ನು ಭಾರತದ ಪರಿಸ್ಥಿತಿಗೆ ಅಳವಡಿಸಿ ನೋಡಿದಾಗ ಎಲ್ಲವೂ ಸ್ವಯಂಸ್ಪಷ್ಟವಾಗುತ್ತದೆ. ಈಗ ಮತ್ತೆ ಭಾರತಕ್ಕೆ ಬಂದರೆ, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯೊಬ್ಬರಿಂದ ಬಹುಮುಖಿ ಮೇಧಾವಿ ಎನ್ನಿಸಿಕೊಂಡ ನಮ್ಮ ಪ್ರಧಾನಿ ಮೋದಿಯವರ ನೋಟು ಅಮಾನ್ಯೀಕರಣ, ಜಿಎಸ್‌ಟಿ ಇತ್ಯಾದಿ ಅಪ್ರಬುದ್ಧ ಹೊಡೆತಗಳಿಂದಾಗಿ ಇಂದು ಭಾರತ ಮುಳುಗುತ್ತಿದೆ. ನಿರುದ್ಯೋಗ ಕಿತ್ತು ತಿನ್ನುತ್ತಿದೆ. ಬಡತನದಿಂದ ಹಸಿವಿನೆಡೆಗೆ ಧಾವಿಸುತ್ತಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡಿ ಸರಕಾರ ನೀಸಬೇಕಿದೆ. ಈ ಎಲ್ಲದರಿಂದಾಗಿ ಭುಗಿಲೇಳುವ ಸಾರ್ವಜನಿಕ ಕಿಚ್ಚನ್ನು ನಿಯಂತ್ರಿಸಲು ನ್ಯಾಯಾಂಗ, ಮಾಧ್ಯಮ, ಸಿಬಿಐ, ಆರ್‌ಬಿಐ ಇತ್ಯಾದಿ ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ಹೆಚ್ಚೂ ಕಮ್ಮಿ ಸರಕಾರದ ಅಂಗಸಂಸ್ಥೆಗಳ ಮಟ್ಟಕ್ಕೆ ಸರ್ಜರಿ ಮಾಡಲಾಗಿದೆ. ಇಂದು ಸಾರ್ವಜನಿಕ ಹಿತಾಸಕ್ತಿ ಅನಾಥವಾಗಿ ಬಿದ್ದಿದೆ.

ನೋಡಿದರೆ, ತಬ್ಬಲಿಯಾದ ಈ ಸಾರ್ವಜನಿಕ ಹಿತಾಸಕ್ತಿಗೆ ಪ್ರಶಾಂತ್ ಭೂಷಣ್ ತನ್ನ ವಕೀಲ ವೃತ್ತಿಯನ್ನೇ ಮುಡಿಪಾಗಿಟ್ಟವರು. ಸಾರ್ವಜನಿಕ ಹಿತಾಸಕ್ತಿಯನ್ನು ಪ್ರಭುತ್ವ ಕಸದಂತೆ ಗುಡಿಸಿ ಎಸೆದ ಮೇಲೆ ಅದರ ಮುಂದಿನ ಕೆಲಸ ಸಾರ್ವಜನಿಕ ಹಿತಾಸಕ್ತಿಯ ಧ್ವನಿಯನ್ನು ದಮನ ಮಾಡುವುದು ತಾನೇ? ಗೋಮುಖವ್ಯಾಘ್ರ ಸರ್ವಾಧಿಕಾರತ್ವವು ಪ್ರಶಾಂತ್ ಭೂಷಣ್‌ರ ಟ್ವೀಟ್‌ಗಳನ್ನು ನೆಪ ಮಾಡಿಕೊಂಡು ಸಾರ್ವಜನಿಕ ಹಿತಾಸಕ್ತಿಯ ಧ್ವನಿಯನ್ನು ದಮನಮಾಡಲು ಸರ್ವೋಚ್ಚ ನ್ಯಾಯಾಲಯವನ್ನೇ ಬಳಸಿಕೊಂಡುಬಿಟ್ಟಿತು ಅನ್ನಿಸುತ್ತದೆ. ಇದನ್ನೆಲ್ಲಾ ಬರೆಯುತ್ತಾ, ಕೋಪ ತಾಪ ವಿಷಾದಗಳನ್ನು ದಾಟಿಕೊಂಡು ಮನಸ್ಸು ತಿಳಿಯಾದಾಗ, ಗಾಂಧಿ-ಅಂಬೇಡ್ಕರ್-ಜೆಪಿ ವರ್ಚಸ್ಸಿನ ನಾಯಕತ್ವದ ಹುಟ್ಟಿಗೆ ಭಾರತಮಾತೆ ಕಾವು ಕೊಡುತ್ತಿರಬೇಕು, ಅದಕ್ಕಾಗಿಯೇ ಭೂಷಣ್‌ರ ಮೇಲೆ ಆರೋಪ, ಅದಕ್ಕಾಗಿಯೇ ಈ ನೆಲದ ಪ್ರಜ್ಞೆಗಳಾದ ಆನಂದ್ ತೇಲ್ತುಂಬ್ಡೆ ಮತ್ತಿತರರನ್ನು ರಾಜಕೀಯ ಖೈದಿ ಮಾಡಿ ಬಂಧನದಲ್ಲಿಟ್ಟಿರುವುದು ಇದ್ದಿರಬಹುದೇ ಅನ್ನಿಸಿತು.

Writer - ದೇವನೂರ ಮಹಾದೇವ

contributor

Editor - ದೇವನೂರ ಮಹಾದೇವ

contributor

Similar News